ನೆದರ್ಲೆಂಡ್ಸ್, ದಿ-
	ಪಶ್ಚಿಮ ಯೂರೋಪಿನ ಒಂದು ದೇಶ. ಈ ದೇಶದ ಭಾಷೆಯಾದ ಡಚ್‍ನಲ್ಲಿ ಇದಕ್ಕೆ ನೇಡರ್‍ಲಾಂಟ್ ಎಂದು ಹೆಸರು. ಇಂಗ್ಲಿಷಿನಲ್ಲಿ ಇದನ್ನು ಹಾಲೆಂಡ್ ಎಂದೂ ಕರೆಯುತ್ತಾರೆ. ರಾಟರ್ ಡ್ಯಾಮಿನ ಸುತ್ತಮುತ್ತಣ ತಗ್ಗುಪ್ರದೇಶದಿಂದಾಗಿ (ಹಾಲೋ ಲ್ಯಾಂಡ್) ಹಾಲೆಂಡ್ ಎಂಬ ಹೆಸರು ಬಂದಿದೆ. ಇದರ ಉತ್ತರ ಪಶ್ಚಿಮಗಳಲ್ಲಿ ಉತ್ತರ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಜರ್ಮನಿ ಮತ್ತು ದಕ್ಷಿಣದಲ್ಲಿ ಬೆಲ್ಜಿಯಮ್ ಇದೆ. ಎರಡನೆಯ ಮಹಾಯುದ್ಧದ ಅಂತ್ಯದಲ್ಲಿ ಇದೂ ಬೆಲ್ಜಿಯಮ್ ಮತ್ತು ಲಕ್ಸೆಂಬರ್ಗ್ ದೇಶಗಳೂ ಸೇರಿ ಬೆನೆಲಕ್ಸ್ (ಬೆಲ್ಜಿಯಮ್, ನೆದರ್ಲೆಂಡ್ಸ್ ಮತ್ತು ಲಕ್ಸೆಂಬರ್ಗ್) ಎಂಬ ಸುಂಕದ ಕೂಟ ಮಾಡಿಕೊಂಡು ಆರ್ಥಿಕ ಸಂಘಟನೆ ಮಾಡಿಕೊಂಡುವು. 1957ರಲ್ಲಿ ಬೆನೆಲಕ್ಸ್ ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಿತು. ನೆದರ್ಲೆಂಡ್ಸಿನ ವಿಸ್ತೀರ್ಣ 41,160 ಚ.ಕಿಮೀ. ಜನಸಂಖ್ಯೆ 1,29,38,836 (1971 ಅಂ.) ವಿಧಿಬದ್ಧ ರಾಜಧಾನಿ ಆಮ್ಸ್‍ಟರ್‍ಡ್ಯಾಮ್. ಸರ್ಕಾರದ ವಾಸ್ತವ ಕೇಂದ್ರ ದಿ ಹೇಗ್.

ಭೌತಿಕ ಭೂವಿವರಣೆ

	ಭೂವಿಜ್ಞಾನ: ಸ್ವಾಭಾವಿಕ ಲಕ್ಷಣಗಳ ಮೇಲೆ ನೆದರ್ಲೆಂಡ್ಸನ್ನು ಒಂಬತ್ತು ವಿಭಾಗಗಳಾಗಿ ವಿಂಗಡಿಸಬಹುದು: ಜೀಲೆಂಡ್, ಹಾಲೆಂಡ್ (ಉತ್ತರ ಮತ್ತು ದಕ್ಷಿಣ), ಫ್ರಿಸಿಯನ್ ದ್ವೀಪಗಳು, ಫ್ರೈಸ್‍ಲೆಂಡ್ ಮತ್ತು ಗ್ರೊನಿಂಗೆನ್ ತೀರ ಪ್ರದೇಶಗಳು, ಮಧ್ಯಂತರದ ನದೀನಿಕ್ಷೇಪ ಬಯಲು, ಮರ್ಧಯಭಾಗದ ಬೆಟ್ಟಪ್ರದೇಶ, ಉತ್ತರ ಬ್ರಬಾಂಟ್ ಮತ್ತು ಉತ್ತರ ಲಿಂಬರ್ಗ್, ದಕ್ಷಿಣ ಲಿಂಬರ್ಗ್, ಪೂರ್ವ ನೆದರ್ಲೆಂಡ್ಸ್. ಈ ಲP್ಪ್ಷಣಗಳು ಚತುರ್ಥ ಭೂಕಾಲದಿಂದ ಈಚೆಗೆ ರೂಪುಗೊಂಡವು. ಹೊರಕಂಡಿರುವ ಶಿಲಾನಿಕ್ಷೇಪಗಳು ಹಿಮಯುಗ ಮತ್ತು ಇತ್ತೀಚಿನ ಕಾಲದವು. ದೇಶದ ಬಹುಭಾಗಗಳ ಇವು ಸಾಕಷ್ಟು ಆಳದವರೆಗೆ ಇಲ್ಲ. ಶಿಲೆಗಳ ಇಳಿವು ಪೂರ್ವ-ದಕ್ಷಿಣಕ್ಕಿದ್ದು ಮಂದ (ದಪ್ಪ) ಹೆಚ್ಚುತ್ತ ಹೋಗುವುದು. ತೃತೀಯ ಭೂಕಾಲದ ಶಿಲೆಗಳೂ ಹೆಚ್ಚು ಮಂದವಾಗಿರುವುದರಿಂದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಮಧ್ಯ ಜೀವಿಯುಗದ ಶಿಲೆಗಳು ಹೆಚ್ಚು ಆಳವಾದ ಕೊಳವೆಬಾವಿಗಳಲ್ಲಿ ಸಿಕ್ಕಿವೆ. ಆದರೆ ದಕ್ಷಿಣ ಲಿಂಬರ್ಗ್ ಮತ್ತು ಪೂರ್ವ ಭಾಗದಲ್ಲಿ ಅಪರೂಪವಾಗಿ ಭೂಮಿಯ ಮೇಲ್ಮೈಯಲ್ಲೂ ಹೊರಕಂಡಿವೆ. ಪೂರ್ವಭಾಗದಲ್ಲಿ ಅರ್ಧದಷ್ಟು ಭಾಗ ಮರಳು ಮತ್ತು ಗ್ರಾವೆಲಿನಿಂದ (ಬಿರುಜುಗಲ್ಲು) ಕೂಡಿದೆ. ಮರಳು ಪ್ರದೇಶದ ಪಶ್ಚಿಮ ಭಾಗದಲ್ಲಿ ಸಮುದ್ರ ದಂಡೆಗಳ ಮೇಲೆ ಮರಳುದಿಬ್ಬಗಳಿವೆ. ಈ ದಿಬ್ಬಗಳ ಮರೆಯ ಸಮುದ್ರದಲ್ಲಿ ಜೇಡು ಮತ್ತು ಮೆಕ್ಕಲು ಹೂಳು ನಿಕ್ಷೇಪವಾಗುತ್ತದೆ. ಸಮುದ್ರಮಟ್ಟಕ್ಕಿಂತ ತಗ್ಗಿನಲ್ಲಿರುವ ಪ್ರದೇಶಗಳಲ್ಲಿ (ದೇಶದ ಅಧಿಕ ಭಾಗ ಹೀಗಿದೆ) ಅನೇಕ ಕಡೆ ಜೌಗು ತುಂಬಿತ್ತು. ಆದರೆ ಈಗ ಆ ಪ್ರದೇಶಗಳನ್ನು ಸಾಗುವಳಿಗೆ ಯೋಗ್ಯವಾದ ಪರಿವರ್ತಿಸಲಾಗಿದೆ. ಅಲ್ಲಿ ರ್ಹೈನ್, ಮಾಸ್ ಮತ್ತು ಇಜ್ಸೆಲ್ ನದಿಗಳು ಭೂಭಾಗಗಳನ್ನು ಆಳವಾಗಿ ಕೊರೆದುಕೊಂಡು ಹರಿಯುತ್ತಿವೆ. ಇವು ಹಲವಾರು ಕಡೆ ವಿಶಾಲ ಮೆಕ್ಕಲು ಜೇಡಿನ ಬಯಲುಗಳನ್ನು ರೂಪಿಸಿವೆ. ಈ ನಿಕ್ಷೇಪಗಳ ಕೆಳಗಡೆ ತೃತೀಯ ಭೂಕಾಲದ ಸಿಹಿನೀರಿನ, ನದೀಮುಖಜ ಮತ್ತು ಸಾಗರಜನಿತ ಶಿಲೆಗಳಿವೆ. ಮೆಸ್ಟ್ರಿಕ್ಟ್ ಪ್ರದೇಶದಲ್ಲಿ ಮೇಲಣ ಕ್ರಿಟೇಷಸ್ ಕಾಲದ ಸುಣ್ಣಶಿಲೆಗಳು ಕಂಡುಬಂದಿವೆ. ಉತ್ತರ ಭಾಗದಲ್ಲಿ ಟ್ರಯಾಸಿಕ್ ಕಾಲದ ಬುಂಟರ್ ಶಿಲೆಗಳು ಅದರ ಅಡಿಯಲ್ಲಿ ಪರ್ಮಿಯನ್ ಕಾಲದ ಜೆಕ್‍ಸ್ಟೈನ್ ಶಿಲೆಗಳೂ ಇವೆ. ಇವುಗಳಲ್ಲಿ ಲವಣಸ್ತರ ಮತ್ತು ಲವಣ ಗುಮ್ಮಟಗಳಿವೆ. ಅಡಿಯಲ್ಲಿ ಕಾರ್ಬಾನಿಫೆರಸ್ ಕಾಲದ (ವೆಸ್ಟ್ ಫಾಲಿಯನ್, ನಮೂರಿಯನ್ ಮತ್ತು ಡಿನಾಸ್ಟಿಯನ್ ವಯಸ್ಸಿನ) ಶಿಲೆಗಳು ಹಾಲೆಂಡಿನ ಬಹು ಭಾಗದಲ್ಲಿ ಹಬ್ಬಿರಬೇಕು. ಮಧ್ಯಜೀವಿಯುಗ ಮತ್ತು ತೃತೀಯ ಭೂಕಾಲದ ಶಿಲೆಗಳ ಇಳಿವು ವಾಯವ್ಯ ದಿಕ್ಕಿಗಿದ್ದು ಅಲ್ಲಿ ಅನೇಕ ತೀವ್ರ ಸ್ತರಭಂಗಗಳಾಗಿವೆ. ಇನ್ನೂ ದಕ್ಷಿಣ ಭಾಗ ರ್ಹೈನ್ ಮತ್ತು ಮಾಸ್ ನದಿಗಳ ಮರಳುಕಟ್ಟೆಗಳಿಂದಲೂ ಉತ್ತರಭಾಗ ನೀರ್ಗಲ್ಲು ನದೀನಿಕ್ಷೇಪಗಳಿಂದಲೂ ಕೂಡಿದ್ದು ಅಲ್ಲಲ್ಲಿ ಎತ್ತರವಾದ ದಿಬ್ಬಗಳಾಗಿವೆ. ಗುಂಡುಜೇಡು ಶಿಲೆಗಳನ್ನು ಡ್ರೆಂಥೆ, ಫ್ರಿಸ್‍ಲೆಂಡ್ ಮತ್ತು ಗ್ರೋನಿಂಗೆನ್ ಪ್ರಾಂತಗಳಲ್ಲಿ ಕಾಣಬಹುದು. ಉತ್ತರ ಬ್ರಬಾಂಟ್ ಮತ್ತು ಲಿಂಬರ್ಗಿನ ಕೆಲವು ಭಾಗಗಳು ಹಿಮಾವೃತವಾಗದಿದ್ದು ಅಲ್ಲಿ ವಾಯುಸಂಚಿತ ನಿಕ್ಷೇಪಗಳಿವೆ. ಹಿಮಯುಗದ ಅನಂತರ ಸಮುದ್ರಮಟ್ಟ ಬಲುಮಟ್ಟಿಗೆ ಈಗಿನ ಸ್ಥಿತಿಗೆ ಬಂದಿತು.

	ಭೂವಿಜ್ಞಾನದ ಆಧಾರದ ಮೇಲೆ ನೆದರ್ಲೆಂಡ್ಸನ್ನು ಸ್ಥೂಲವಾಗಿ ನಾಲ್ಕು ಮುಖ್ಯ ಪ್ರದೇಶಗಳಾಗಿ ವಿಂಗಡಿಸಬಹುದು:
ದಕ್ಷಿಣ ಲಿಂಬರ್ಗ್ ಪ್ರಸ್ಥಭೂಮಿ ಪ್ರದೇಶ: ಇದು ಸುಮಾರು 32 ಕಿಮೀ. ಉದ್ದವಾಗಿ ಬೆಲ್ಜಿಯಮ್ ಮತ್ತು ಜರ್ಮನಿ ಮಧ್ಯೆ ಹಬ್ಬಿದೆ. ಉತ್ತರದಲ್ಲಿ ಸಿಟ್ಟಾರ್ಡ್ ನಗರದವರೆಗೆ ತುಂಬ ಪುರಾತನ ಪರ್ವತಪ್ರದೇಶವಾಗಿದೆ. ಇಲ್ಲಿ ವೇಗವಾಗಿ ಹರಿಯುವ ನದಿಗಳು ಆಳವಾದ ಕಣಿವೆ ಕಂದಕಗಳನ್ನು ಕೊರೆದಿವೆ. ಬಲುಮಟ್ಟಿಗೆ ಮಧ್ಯಜೀವಿಯುಗದ ಶಿಲೆಗಳಿಂದ ಕೂಡಿದೆ. ಸುಮಾರು 91.5 ಕಿಮೀನಿಂದ 305 ಕಿಮೀನಷ್ಟು ಮೇಲ್ಪದರ ನುಣುಪಾದ ಹಳದಿಛಾಯೆಯ ಬೂದುಬಣ್ಣದ ಬಂಕೆಮಣ್ಣಿನಿಂದ ಕೂಡಿದೆ. ಕ್ರಿಟೇಷಸ್ ಕಾಲದ ಶಿಲೆಗಳ ಅಡಿಯಲ್ಲಿ ಕಾರ್ಬಾನಿಫರಸ್ ಕಾಲದ ಶಿಲೆಗಳಿವೆ. ಇವುಗಳಲ್ಲಿ ಕಲ್ಲಿದ್ದಲು ಸ್ತರಗಳುಂಟು. ಇವು ಬೆಲ್ಜಿಯಮ್ ದೇಶದಿಂದ ಪೂರ್ವಕ್ಕೆ ಮುಂದುವರಿದು ಬಂದಿವೆ.

ದಕ್ಷಿಣ ಮತ್ತು ಪೂರ್ವ ಮರಳು ಪ್ರದೇಶ: ಇವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು: 1. ಉತ್ತರ ಬ್ರಬಾಂಟ್ ಮತ್ತು ಉತ್ತರ ಲಿಂಬರ್ಗ್ ಮತ್ತು ಹಿಮಪ್ರವಾಹಕ್ಕೆ ಒಳಪಡದಿರುವ ಭಾಗಗಳು. ಇವು ಅತ್ಯಂತ ವಿಶಾಲವಾಗಿದೆ. ಇಲ್ಲಿ ಇಳಿಜಾರು ಆಗ್ನೇಯಾಭಿಮುಖವಾಗಿದೆ. ಎತ್ತರ ಸಾಮಾನ್ಯವಾಗಿ ಎಲ್ಲೂ 45 ಮೀಗಳಿಗಿಂತ ಹೆಚ್ಚಿಲ್ಲ. ಮೆಕ್ಕಲು ಕಣಿವೆಗಳಲ್ಲಿ ಸಸ್ಯಾಂಗಾರವಿರುವ ನೆಲ ಅಲ್ಲಲ್ಲಿ ಮಚ್ಚೆಗಳಂತೆ ಕಾಣುತ್ತದೆ. 2. ಈ ದೇಶದ ಮಧ್ಯಭಾಗ ಮರಳು ಮತ್ತು ಹಿಮನದಿಗಳಿಂದಾದ ದಿಬ್ಬ, ವಿಶಾಲವಾದ ಕಣಿವೆಗಳಿಂದ ಕೂಡಿದೆ. ಇದು 91.5 ಮೀ.ಗಳಿಗೂ ಹೆಚ್ಚು ಎತ್ತರವಾದ ಪ್ರಸ್ಥಭೂಮಿ. 3. ಈ ಭಾಗದ ಪೂರ್ವಕ್ಕೆ ಡ್ರೆಂಥೆ ಗುಂಡು ಜೇಡುಶಿಲಾ ಪ್ರಸ್ಥಭೂಮಿ ಮತ್ತು ಫ್ರೀಸ್‍ಲೆಂಡಿನ ಪೂರ್ವಾರ್ಧ ಭಾಗವೂ ಇವೆ. ಇದರಲ್ಲಿ ಮರಳು ಮಿಶ್ರಿತವಾದ ಮಣ್ಣು ಮತ್ತು ಸಸ್ಯಾಂಗಾರ ಉಂಟು. ಆದರೆ ಈಗ ಅವನ್ನೆಲ್ಲ ಹೊರತೆಗೆದು ಈ ಪ್ರದೇಶವನ್ನು ಬೇಸಾಯ ಭೂಮಿಯಾಗಿ ಮಾಡಿದ್ದಾರೆ.

ರೈನ್ ಮತ್ತು ಮಾಸ್ ನದಿಗಳ ಮೆಕ್ಕಲು ಪ್ರದೇಶ: ಇದು ನೆದರ್ಲೆಂಡ್ಸಿನ ಮಧ್ಯಭಾಗದಲ್ಲಿದ್ದು, ರ್ಹೈನ್ ಮತ್ತು ವಿವಿಧ ದಿಕ್ಕುಗಳಲ್ಲಿ ಹರಿಯುತ್ತಿರುವ ಅದರ ಉಪನದಿಗಳ ಮುಖಜಭೂಮಿಯಲ್ಲಿ ಹಬ್ಬಿದೆ. ನಿಧಾನವಾಗಿ ಹೆಚ್ಚು ತಿರುವುಮುರುವುಗಳಲ್ಲಿ ಹರಿಯುತ್ತಿರುವ ಮಾಸ್ ನದಿ ಮತ್ತು ಉಪನದಿಗಳೆಲ್ಲ ಸಾಕಷ್ಟು ಹೂಳೂ ಅಥವಾ ಗೋಡುಮಣ್ಣನ್ನು ತುಂಬುತ್ತಿವೆ. ಒಳನಾಡು ತಗ್ಗಾಗಿರುವುದರಿಂದ ನೀರು ನುಗ್ಗದಂತೆ ರಕ್ಷಿಸಲು ಈ ನದಿಗಳ ಇಕ್ಕೆಲಗಳಲ್ಲಿ ಎತ್ತರವಾದ ಡೈಕುಗಳನ್ನು (ಗೋಡೆ) ಅನೇಕ ಭಾಗಗಳಲ್ಲಿ ಕಟ್ಟಿದ್ದಾರೆ.
ತೀರ ಪ್ರದೇಶ: ದೇಶದ ಬಹುಭಾಗ ಸಮುದ್ರಮಟ್ಟಕ್ಕಿಂತ ಸಾಕಷ್ಟು ತಗ್ಗಿನಲ್ಲಿದೆ. ಈ ಪ್ರದೇಶವನ್ನು ಅಳಿದೆಗಳು ಮತ್ತು ಮರಳುದಿಬ್ಬಗಳಿಂದ ಕೂಡಿದ ಹಲವಾರು ವಲಯಗಳಾಗಿ ವಿಂಗಡಿಸಬಹುದು. ತೀರದುದ್ದಕ್ಕೂ ಡೈಕುಗಳನ್ನು ನಿರ್ಮಿಸಿದ್ದಾರೆ. ಆದರೂ ತಗ್ಗುಪ್ರದೇಶವಾದ್ದರಿಂದ ಸಾಮಾನ್ಯವಾಗಿ ಜೌಗು ಲಕ್ಷಣಗಳಿವೆ. ಇಂಥ ಪ್ರದೇಶಗಳನ್ನೆಲ್ಲ ವ್ಯವಸಾಯಯೋಗ್ಯವಾಗಿ ಮಾಡಲು ತೀವ್ರಗತಿಯಲ್ಲಿ ಕಾರ್ಯ ನಡೆಯುತ್ತಿದೆ.

	ಸಮುದ್ರದ ನೀರು ತಗ್ಗುಪ್ರದೇಶಗಳಿಗೆ ನುಗ್ಗದಂತೆ ತಡೆಯಲು ಎತ್ತರ ಗೋಡೆಗಳನ್ನು ನಿರ್ಮಿಸುವ ಕಾರ್ಯ, ಒಂದನೆಯ ಶತಮಾನದಲ್ಲಿ ನಡೆದ ಅಮುದ್ರದ ಅತಿಕ್ರಮಣಾನಂತರ, ಆದಿಯಲ್ಲಿ ನೆಲಸಿದ್ದವರಿಂದಲೇ ಆರಂಭವಾಗಿದೆ. ಆದರೆ ಎಂಟನೆಯ ಮತ್ತು ಒಂಬತ್ತನೆಯ ಶತಮಾನಗಳಲ್ಲೇ ಹೆಚ್ಚು ಡೈಕ್ ಮತ್ತು ದಿಬ್ಬಗಳನ್ನು ನಿರ್ಮಿಸಿ ನೆಲ ಮತ್ತು ಜನರನ್ನು ರಕ್ಷಿಸುವ ಕಾರ್ಯ ನಡೆಯಿತು. ಈ ಕಾರ್ಯ ಹದಿಮೂರನೆಯ ಶತಮಾನದಲ್ಲಿ ಇತರ ಪ್ರದೇಶಗಳಲ್ಲಿಯೂ ಪ್ರಾರಂಭಿಸಿದರು. ಹದಿನಾಲ್ಕನೆಯ ಮತ್ತ ಹದಿನೈದನೆಯ ಶತಮಾನಗಳಲ್ಲಿ ಇದು ಮುಂದುವರಿದು ರಾಟರ್ ಡ್ಯಾಮ್ ನಗರವನ್ನು ಸಂಪೂರ್ಣವಾಗಿ ಸಂರಕ್ಷಿಸುವುದು ಕೈಗೂಡಿತು. ಇಷ್ಟಾದರೂ ಇಪ್ಪತ್ತನೆಯ ಶತಮಾನದಲ್ಲಿ ಆರಂಭವಾದ ಕಾರ್ಯವೇ ಅತಿವ್ಯಾಪಕವಾದದ್ದು. ಇಂಥ ಅನೇಕ ಕಾರ್ಯಗಳಿಂದ, ಮುಖ್ಯವಾಗಿ ನೆದರ್ಲೆಂಡ್ಸಿಗೆ, ಗಣನೀಯ ಪ್ರಮಾಣದಲ್ಲಿ ಸಾಗುವಳಿ ಭೂಮಿಯನ್ನು ಸೇರಿಸಿದಂತಾಯಿತು.

	ನೆದರ್ಲೆಂಡ್ಸಿನಲ್ಲಿ ಹಳೆ ಶಿಲಾಯುಗ, ಮಧ್ಯಶಿಲಾಯುಗ, ನವೀನ ಶಿಲಾಯುಗ ಮತ್ತು ಲೋಹಯುಗದ ಸಂಸ್ಕøತಿಯ ಹಲವಾರು ಅವಶೇಷಗಳು ಕಂಡುಬಂದಿವೆ. ಖನಿಜ ಸಂಪನ್ಮೂಲ ಸಾಮಾನ್ಯವಾಗಿ ಅಲ್ಪವೆಂದೇ ಹೇಳಬೇಕು. ಮುಖ್ಯ ಗಣಿಗಾರಿಕೆಯೆಂದರೆ ಕೇವಲ ಕಲ್ಲಿದ್ದಲು, ಸಸ್ಯಾಂಗಾರ, ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಮತ್ರ. ಕಾರ್ಬಾನಿಫರಸ್ ಕಾಲದ ಶಿಲೆಗಳಲ್ಲಿ ಸುಮಾರು 2743.11 ಮೀ.ನಷ್ಟು ಮಂದವಾದ ಕಲ್ಲಿದ್ದಲು ಶೇಖರಣೆ ಆಗಿದೆ. ಈ ಸ್ತರಗಳು ದಕ್ಷಿಣ ಲಿಂಬರ್ಗ್‍ನ ವಾಯವ್ಯ ಭಾಗದಲ್ಲಿ ಮತ್ತು ಡೇಪೀಲ್ ಪ್ರದೇಶದಲ್ಲಿ (ಲಿಂಬರ್ಗ್ ಮತ್ತು ಉತ್ತರ ಬ್ರಬಾಂಟ್) ಅತಿ ಕಡಿಮೆ ಆಳದಲ್ಲೇ (62-122 ಮೀ) ಸಿಗುವುವು. ಹದಿಮೂರನೆಯ ಶತಮಾನದ ಮಧ್ಯಭಾಗದಿಂದಲೇ ಗಣಿಗಾರಿಕೆ ಸಾಕಷ್ಟು ವ್ಯಾಪಕವಾಗಿ ನಡೆದಿದೆ. 1937ರ ಸುಮಾರಿಗೆ 14.8 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಹೊರತೆಗೆಯಲಾಗಿತ್ತು. ಡೇಪೀಲ್ ಪ್ರದೇಶದಲ್ಲಿ 610-915 ಮೀ ಆಳದವರೆಗೆ ಕಲ್ಲಿದ್ದಲು ಗಣಿಗಾರಿಕೆ ನಡೆದಿದೆ. ಸುಮಾರು 610 ಮೀ ದಪ್ಪದ ಮೇಲ್ಪದರ ಮಣ್ಣನ್ನು ಅಗೆಯಬೇಕಾಗಿರುವುದು ಗಣಿಗಾರಿಕೆಗೆ ಮುಖ್ಯ ಅಡಚಣೆ. ದೀ ಹೇಗ್ ಮತ್ತು ಡ್ರೆಂಥೆ ಬಳಿ ಸಾಕಷ್ಟು ಮೊತ್ತದ ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯುತ್ತಾರೆ. ವಿಶಾಲವಾದ ತೈಲನಿಕ್ಷೇಪವೆಂದರೆ ಷೂನೆಬೀಕ್. ಇದು ಜರ್ಮನಿಯ ಅಂಚಿನಲ್ಲಿದೆ. ಇಲ್ಲಿಯ ಉತ್ಪಾದನೆ 1950ರಲ್ಲಿ 7,11,200 ಮೆಟ್ರಿಕ್ ಟನ್ನುಗಳು. ಇತ್ತೀಚೆಗೆ ಉತ್ಪಾದನೆ ಇನ್ನೂ ಹೆಚ್ಚಿದೆ. 1952ರಲ್ಲೇ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆ ಹಚ್ಚಿದ್ದು ಪ್ರತಿವರ್ಷ 150 ಮಿಲಿಯನ್ ಘನ ಮೀಟರುಗಳಿಗೂ ಹೆಚ್ಚು ಉತ್ಪಾದನೆ ಆಗುವುದೆಂದು ಅಂದಾಜು ಮಾಡಲಾಗಿದೆ. ಹ್ಯಾಂಗೆಲೊ ಮತ್ತು ವಿನ್‍ಷಾಟೆನ್ ಬಳಿ ಪರ್ಮಿಯನ್ ಕಾಲದ ಸ್ತರಗಳಿಮದ ಲವಣವನ್ನು ಹೊರತೆಗೆಯುತ್ತಾರೆ. ಗ್ರೋನಿಂಗೆನ್ ಮತ್ತು ಬೊಯ್ ಕೆಲೊ ಬಳಿಯೂ ಲವಣ ಗಣಿಗಳಿವೆ. ಮರಳು ಶಿಲೆಯನ್ನು ಲಿಂಬರ್ಗ್ ಬಳಿ ಅಗೆದು ಹೊರತೆಗೆಯುತ್ತಾರೆ. ಆದರೆ ಬಿಳಿ ಜೇಡಿಮಣ್ಣು ದೇಶದ ಎಲ್ಲ ಭಾಗಗಳಲ್ಲಿಯೂ ಹೇರಳವಾಗಿ ಸಿಗುತ್ತದೆ.							(ಎಂ.ಎನ್.ಎಂ.)

	ಮೇಲ್ಮೈ ಲಕ್ಷಣ: ನೆದರ್ಲೆಂಡ್ಸಿನ ಬಹುಭಾಗ ರೈನ್ ನದಿಯ ಮುಖಜ ಭೂಮಿ ಪ್ರದೇಶ. ಇದು ಮಾನವನ ಕೈವಾಡದಿಂದ ಬಹಳ ಮಟ್ಟಿಗೆ ಮಾರ್ಪಟ್ಟಿದೆ. ದೇವರು ಪ್ರಪಂಚವನ್ನು ಸೃಷ್ಟಿಸಿದ, ಆದರೆ ನಾವು ಹಾಲೆಂಡನ್ನು ಮಾಡಿದೆವು- ಎಂಬುದಾಗಿ ಡಚ್ ಜನರು (ಹಾಲೆಂಡಿನ ಜನರು) ಹೇಳುತ್ತಾರೆ. ಇದನ್ನು ಬಂಗಾಲದ ನದೀಮುಖಜ ಭೂಮಿಯ ಭಾಗಗಳೊಂದಿಗೆ ಹೋಲಿಸಬಹುದು. ಆದರೆ ಇಲ್ಲಿ ವಾಯುಗುಣ ಹೆಚ್ಚು ತಂಪು; ಅಲ್ಲದೆ ಮುಖಜಭೂಮಿಯ ಮೆಕ್ಕಲುಮಣ್ಣಿನ ಜೊತೆಗೆ 15,000-1,00,000 ವರ್ಷಗಳ ಹಿಂದಿನ ಚಾತುರ್ಥಿಕ ಹಿಮಾಚ್ಛಾದನದ ಫಲವಾದ ಹಿಮಾನಿ ಮತ್ತು ನದೀಹಿಮಾನಿ ನಿಕ್ಷೇಪಗಳು ಬೆರೆತಿವೆ. ಹಿಮಾನಿ ಅಪಕ್ಷೇಪದ ಮರಳು, ನದೀ ಹಿಮಾನಿ ನಿಕ್ಷೇಪ ಇವು ಮುಖ್ಯವಾಗಿ ಉತ್ತರದ ಸ್ವಲ್ಪ ಎತ್ತರದ ಪ್ರದೇಶದಲ್ಲಿದೆ. ಸಾಮಾನ್ಯವಾಗಿ ಇವನ್ನು ಕ್ಯಲುನಾ ವಲ್ಗಾರಿಸ್ ಮುಂತಾದ ಕುರುಚಲು ಗಿಡಗಳು ಮುಚ್ಚಿರುತ್ತವೆ. ಅತ್ಯಂತ ಉತ್ತರದ ಕೆಲವು ಭಾಗಗಳಲ್ಲಿ ಇನ್ನೂ ದಟ್ಟವಾದ, ಮೂಲತಃ ಹೆಚ್ಚು ಫಲವತ್ತಾದ, ಹಿಮಾನಿ ಯುಗದ ಕಲ್ಲುಗುಂಡುಗಳಿಂದ ಕೂಡಿದ, ಜೇಡಿಮಣ್ಣಿನ ಸ್ತರಗಳಿವೆ. ದಕ್ಷಿಣದಲ್ಲಿ ರೈನ್ ಮತ್ತು ಮಾಸ್ ನದಿಗಳ ಮೆಕ್ಕಲು ಮಣ್ಣು ಅಧಿಕವಾಗಿವೆ. ಇದರ ತಗ್ಗಿನ ಸಣ್ಣ ಮಣ್ಣು ಸಮುದ್ರಮಟ್ಟಕ್ಕಿಂತ ಕೆಳಕ್ಕಿದೆ. ಕರಾವಳಿಯ ವಿಶಾಲವಾದ ಮರಳು ದಂಡೆಗಳಿಂದ ಪಶ್ಚಿಮದ ಗಾಳಿಯಲ್ಲಿ ತೂರಿಬಂದ ಮರಳುಗುಪ್ಪೆಗಳು ಮೇಲಿನ ಪದರಗಳಲ್ಲಿವೆ. ಇವು ದಕ್ಷಿಣ-ನೈಋತ್ಯದಿಂದ ಉತ್ತರ-ಆಗ್ನೇಯದ ದಿಕ್ಕಿನಲ್ಲಿ ಹಬ್ಬಿ ದಂಡೆಯಾಚೆಗಿನ ದ್ವೀಪಗಳಲ್ಲಿ ಪೂರ್ವಾಭಿಮುಖವಾಗಿ ಸಾಗಿವೆ. ಬಂಗಾಲದ ತಗ್ಗಿನ ದ್ವೀಪಗಳಿಗೂ ಇವಕ್ಕೂ ಸಾಮ್ಯವಿದೆ. ಆದರೆ ಈಚಿನ ಶತಮಾನಗಳಲ್ಲಿ ವಿಸ್ತøತವಾದ ಒಡ್ಡುಗಳನ್ನೂ (ಡೈಕ್) ನಾಲೆಗಳನ್ನೂ ನಿರ್ಮಿಸಲಾಗಿದೆ. ನೀರಿನ ಹರಿವು ಹಾಗೂ ಜಲಸಾರಿಗೆ ಇವುಗಳ ಉದ್ದೇಶ. ಇವುಗಳಲ್ಲಿಯ ಹೆಚ್ಚಿನ ನೀರನ್ನು ಪಂಪುಗಳಿಂದ ಎತ್ತಿ ಹೊರಕ್ಕೆ ಹರಿಯಿಸಲಾಗುತ್ತದೆ. ಈ ಕಾರ್ಯಕ್ಕೆ ಹಿಂದೆ ಚಿತ್ರಮಯವಾದ ಗಾಳಿಗಿರುಗಟ್ಟೆಗಳನ್ನು ಬಳಸಲಾಗುತ್ತಿತ್ತು. ಹಾಲೆಂಡ್ ಇಂದಿಗೂ ಇವಕ್ಕೆ ಪ್ರಸಿದ್ಧವಾಗಿದೆ. ಅನಂತರ ಆವಿ ಪಂಪುಗಳು ಕೊನೆಗೆ ಡೀಸೆಲ್ ಮತ್ತು ವಿದ್ಯುತ್ ಪಂಪುಗಳು ಬಂದವು. ರೈನ್ ನದಿಯ ಶಾಖೆಗಳ ನೀರು ತಗ್ಗಿನ ನೆಲಕ್ಕೆ ಹರಿದು ಬರದಂತೆ ಅನೇಕ ಶತಮಾನಗಳಿಂದಳು ಅವನ್ನು ನಿಯಂತ್ರಿಸಲಾಗಿದೆ. ಹೀಗೆ ಗಳಿಸಲಾದ ದೀರ್ಘ ಅನುಭವವನ್ನು ಬಳಸಿಕೊಂಡು ಈಗ ಹೊಸ ಹೊಸ ನೆಲದ ಉದ್ದರಣ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ನೆಲದ ಅಭಾವ ಹಾಗೂ ನೈಸರ್ಗಿಕ ಅನಾಹುತಗಳಿಂದಾಗಿ ಡಚ್ಚರು ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಹಾಲೆಂಡಿನಲ್ಲಿ ಹಳೆಯ ಗಟ್ಟಿ ಶಿಲೆ ಕಾಣಸಿಗುವುದು ಅಪರೂಪ. ತೃತೀಯ ಭೂಯುಗದ ಬಂಡೆಗಳ ದೃಶ್ಯಾಂಶಗಳು ದಕ್ಷಿಣದಲ್ಲೂ ಪೂರ್ವದಲ್ಲೂ ಇವೆ. ಇಲ್ಲಿ ಕೆಲವು ಸ್ಥಳಗಳಲ್ಲಿ ಹಳೆಯ ಮೆಸೋಜೋಯಿಕ್ ಕಲ್ಪದ ಶಿಲೆಗಳು ಹೊರತೋರುತ್ತವೆ. ಇನ್ನೂ ಹಳೆಯ, ಕಲ್ಲಿದ್ದಲಿಂದ ಕೂಡಿದ ಕಾರ್ಬನಿಫರಸ್ ಸ್ತರಗಳು ಗಣಿ ತೋಡಬಹುದಾದಷ್ಟೇ ಆಳದಲ್ಲಿ (ಸುಮಾರು 700 ಮೀ.) ಇವೆ. ತೃತೀಯ ಭೂಯುಗದ ಬಂಡೆಗಳೂ ಬಹುಶಃ ಹಳೆಯ ಸ್ತರಗಳೂ ಉತ್ತರದಲ್ಲಿ ಆಳಕ್ಕೆ ಹೋಗುತ್ತವೆ.

	ವಾಯುಗುಣ: ಇಲ್ಲಿಯದು ಪಶ್ಚಿಮ ಸಾಗರಿಕ ವಾಯುಗುಣ. ಇದು ಪೂರ್ವ ಬ್ರಿಟನ್ನಿನ ವಾಯುಗುಣವನ್ನು ಸ್ಥೂಲವಾಗಿ ಹೋಲುತ್ತದೆ. ದೇಶದ ಪೂರ್ವಾರ್ಧದಲ್ಲಿ ಜನವರಿಯ ಮಾಧ್ಯ ಉಷ್ಣತೆಗಳು 0 ಡಿಗ್ರಿಗಿಂತ ಕೆಳಗೆ ಇರುತ್ತವೆ. ಹೆಚ್ಚು ಸಾಗರಿಕವಾದ ಪಶ್ಚಿಮದಲ್ಲೂ ಉಷ್ಣತೆ ಏರುವುದಿಲ್ಲ. ಚಳಿಗಾಲ ತೀವ್ರವಾದಾಗ ಕಾಲುವೆಗಳು ಸರೋವರಗಳೂ ಗಡ್ಡೆಕಟ್ಟುತ್ತವೆ. ಜುಲೈ ತಿಂಗಳ ಮಾಧ್ಯ ಉಷ್ಣತೆ 20 ಡಿಗ್ರಿ-23 ಡಿಗ್ರಿ. 33 ಡಿಗ್ರಿಗಿಂತ ಉಷ್ಣತೆ ಹೆಚ್ಚುವುದು ಬಹಳ ಅಪರೂಪ. ಸಾಮಾನ್ಯವಾಗಿ ಅವನಮನದಿಂದ ಮಳೆಯಾಗುತ್ತದೆ. ಮಳೆಯ ಮಾಧ್ಯ 55-80 ಸೆಂಮೀ. ಇದು ಎಲ್ಲ ಋತುಗಳಲ್ಲೂ ಹಂಚಿಕೆಯಾಗುತ್ತದೆ. ಹವಾಗುಣದಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ.

	ಸಸ್ಯಪ್ರಾಣಿ ವರ್ಗ: ನೆದರ್ಲೆಂಡ್ಸಿನಲ್ಲಿ ಯೂರೊ-ಸೈಬೀರಿಯನ್ ಸಸ್ಯಪ್ರಾಂತ್ಯದ ಅಟ್ಲಾಂಟಿಕ್ ಜಿಲ್ಲೆಯ ವಿಶಿಷ್ಟ ಸಸ್ಯಗಳಿವೆ. ಮರಳು ದಿಣ್ಣೆಗಳ ಉಪ್ಪು ಹಾಗೂ ಜಲಸಸ್ಯಗಳೂ ಅರಣ್ಯ ಹುಲ್ಲುಗಾವಲು ಹಾಗೂ ಸಾಗುವಳಿ ಸಸ್ಯಗಳೂ ಪ್ರಧಾನವಾಗಿವೆ. ಇಲ್ಲಿ ಓಕ್, ಎಲ್ಮ್, ಪೈನ್ ಲಿಂಡೆನ್ ಮತ್ತು ಬೀಚ್ ಮರಗಳು ಸಾಮಾನ್ಯ. ಈ ದೇಶ ಹೂವುಗಳಿಗೆ ಪ್ರಸಿದ್ಧವಾಗಿದೆ. ಬೆಳೆಸಿದ ಹಾಗೂ ನೈಸರ್ಗಿಕ ಹೂವುಗಳು ಬಲು ಸುಂದರ ಹಾಗೂ ವೈವಿಧ್ಯಮಯ.

    ನೈಸರ್ಗಿಕ ಪ್ರಾಣಿಗಳು ಮಾನವನ ಚಟುವಟಿಕೆಗಳಿಂದಾಗಿ ಬಹುತೇಕ ಮರೆಯಾಗಿವೆ. ಹಿಂದೆ ಇಲ್ಲಿದ್ದ ಬ್ಯಾಡ್ಜರ್, ಡೇಗೆ, ನದಿನಳ್ಳಿ, ಜವುಗಿನ ಆಮೆ ಇವು ಈಗ ಇಲ್ಲ. ಅನೇಕ ಜಾತಿಯ ಮೀನುಗಳನ್ನೂ ಹಂದಿಗಳನ್ನೂ ಕೆಲವು ಗ್ರೌಸ್ (ಕೋಳಿ ಜಾತಿಯ ಹಕ್ಕಿ) ಬೆಳೆಸಲಾಗಿದೆ.
ಜನಜೀವನ
	ಜನ: ಮೂಲತಃ ಡಚ್ಚರು ಫ್ರಿಸಿಯನರ, ಸ್ಯಾಕ್ಸನರ ಮತ್ತು ಫ್ರಾಂಕರ ಮಿಶ್ರಣ. ಅನೇಕ ಶತಮಾನಗಳಿಂದಲೂ ವಿವಿಧ ಪ್ರದೇಶಗಳಿಂದ ನಿರಾಶ್ರಿತರು ಬಂದು ಡಚ್ ನಗರಗಳಲ್ಲಿ ನೆಲಸಿದ್ದಾರೆ. 20ನೆಯ ಶತಮಾನದಲ್ಲಿ ಡಚ್ ಇಂಡೋನೇಷಿಯನರೂ ಡಚ್ ವಸಾಹತುಗಳಿಂದ ಬಿಳಿಯರಲ್ಲದ ಜನರೂ ಇಲ್ಲಿಗೆ ಬಂದಿದ್ದಾರೆ.

	ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಮಂದಿ ಪಶ್ಚಿಮದ ಚಾಯಿಟ್ ಹಾಲೆಂಡ್ ಮತ್ತು ನೋರ್ಟ್ ಹಾಲೆಂಡ್ ಹಾಗೂ ಮಧ್ಯದ ಯೂಟ್ರೆಕ್ಟ್ ಪ್ರಾಂತ್ಯಗಳಲ್ಲಿ ವಾಸಿಸುತ್ತಾರೆ. ಇಲ್ಲಿ ಜನಸಾಂದ್ರತೆ ಚ.ಕಿಮೀ.ಗೆ 895. ಹಾಲೆಂಡಿನ ನಾಲ್ಕು ಅತ್ಯಂತ ದೊಡ್ಡ ನಗರಗಳಾದ ಆಮ್ಸ್‍ಟರ್‍ಡ್ಯಾಮ್, ರಾಟರ್ ಡ್ಯಾಮ್, ದಿ ಹೇಗ್ ಮತ್ತು ಯೂಟ್ರೆಕ್ಟ್ ಈ ಪ್ರದೇಶದಲ್ಲಿದೆ. ಉತ್ತರದ ಗ್ರೋನಿಂಗೆನ್, ಫ್ರೀಸ್‍ಲೆಂಡ್, ಡ್ರೆಂಟ ಪ್ರಾಂತ್ಯಗಳಲ್ಲಿ ಜನಸಾಂದ್ರತೆ ಕಡಿಮೆ. ಅಲ್ಲಿ ಚ.ಕಿಮೀ.ಗೆ 90 ಜನರಿದ್ದಾರೆ.

	ಧರ್ಮ: ನೆದರ್ಲೆಂಡ್ಸ್ ಚಿಕ್ಕ ದೇಶವಾದರೂ ವಿಚಾರಸ್ವಾತಂತ್ರ್ಯಕ್ಕೆ ವಿಶೇಷ ಪ್ರಾಮುಖ್ಯ ನೀಡಿದೆ. ಸಂವಿಧಾನದಲ್ಲಿ ಪ್ರಜೆಗಳಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ದತ್ತವಾಗಿದೆ. ಇಲ್ಲಿಯ ಜನರಲ್ಲಿ 41.6% ಪ್ರಾಟೆಸ್ಟಂಟರು, 40.5% ರೋಮನ್ ಕ್ಯಾತೊಲಿಕರು. ಪ್ರಾಟೆಸ್ಟಂಟರಲ್ಲಿ ಬಹಳ ಮಂದಿ ಕ್ಯಾಲ್ವಿನಿಸ್ಟ್ ಚರ್ಚ್‍ಗಳಿಗೆ ಸೇರಿದವರು.

ಆರ್ಥಿಕತೆ

	ಕೃಷಿ: ಅನೇಕ ಶತಮಾನಗಳಿಂದಲೂ ಇಲ್ಲಿ ಕೃಷಿ ಒಂದು ವಿಶೇಷ ಜಾಣ್ಮೆಯ ಕಸುಬಾಗಿದೆ. ವೈಜ್ಞಾನಿಕ ಕೃಷಿ ವಿಧಾನಗಳು ಇಲ್ಲಿಂದ ಹಾಗೂ ಇನ್ನೊಂದು ತಗ್ಗಿನ ದೇಶವಾದ ಬೆಲ್ಜಿಯಮ್‍ನಿಂದ ಬ್ರಿಟನ್ನಿಗೆ 18ನೆಯ ಶತಮಾನದಲ್ಲಿ ಹರಡಿತು. ನಗರಗಳ ಬಳಿ ಸಾಂದ್ರಬೇಸಾಯದ ತರಕಾರಿ ತೋಟಗಳಿವೆ. ವಿಶಾಲ ಜಮೀನುಗಳನ್ನು ಶೀತಲ ಹವೆಯಿಂದ ರಕ್ಷಿಸಲು ಗಾಜಿನ ಮನೆಗಳನ್ನು ನಿರ್ಮಿಸಲಾಗಿದೆ. ಬೇಸಾಯದ ಇತರ ನೆಲೆಗಳಲ್ಲೂ ಸಾಂದ್ರಬೇಸಾಯ ಸಾಮಾನ್ಯ. ಇಲ್ಲಿ ಹೈನು ಉದ್ಯಮವೂ ವ್ಯಾಪಕವಾಗಿ ಬೆಳೆದಿದೆ. ಇಲ್ಲಿಯ ಜನಕ್ಕೆ ಅನೇಕ ಶತಮಾನಗಳಿಂದಲೂ ನೆಲದ ಹಸಿವು. ಇದರಿಂದಾಗಿ ಅವರು ಸಮುದ್ರದಿಂದ ನೆಲದ ಉದ್ದರಣ ಕಾರ್ಯ ಕೈಗೊಂಡಿದ್ದಾರೆ. ಸಸ್ಯಾಂಗಾರ, ಜೇಡಿಮಣ್ಣೂ ಮತ್ತು ಮರಳಿನಿಂದ ಕೂಡಿದ ಬಂಜರು ನೆಲವನ್ನು ಕೃಷಿಗಾಗಿ ಸುಧಾರಿಸುತ್ತಿದ್ದಾರೆ. ಸಮುದ್ರದಿಂದ ಕಸಿದುಕೊಂಡ ನೆಲದಿಂದ ನೀರು ಬಸಿದುಹೋಗುವಂತೆ ಮಾಡುತ್ತಿದ್ದಾರೆ. ರೋಮನರ ಕಾಲದಲ್ಲಿ ಸಮುದ್ರದ ನೀರು ಹರಿದು ಬೂದು ತೆಟ್ಟೆಯಾದ ಕಡಲಾಗಿದ್ದ ಜೈಡರ್ ಜೀ ಪ್ರದೇಶದ ಉದ್ಧರಣಕ್ಕಾಗಿ 1920ರಲ್ಲಿ ಕಾರ್ಯಕ್ರಮವೊಂದನ್ನು ಆರಂಭಿಸಲಾಯಿತು. ಈಗ ಇದರ ಮುಖಕ್ಕೆ ಅಡ್ಡಲಾಗಿ ಒಡ್ಡನ್ನು ನಿರ್ಮಿಸಲಾಗಿದೆ. ವಿಶಾಲ ನೆಲ ಈಗ ಬೇಸಾಯದ ಜಮೀನಾಗಿ ಪರಿವರ್ತನೆಗೊಂಡಿದೆ. ಹಳ್ಳಿಗಳನ್ನೂ ಪಟ್ಟಣಗಳನ್ನೂ ಸುಯೋಜಿತವಾಗಿ ನಿರ್ಮಿಸಲಾಗುತ್ತಿದೆ. ಇಲ್ಲಿ ಕುಗ್ಗಿ ಉಳಿದಿರುವ ತಿಳೀನೀರಿನ ಇಸೆಲ್ ಸರೋವರ (ಇಸೆಲ್‍ಮಿಯರ್) ನೌಕಾಯಾನ ಯೋಗ್ಯವಾದ್ದು. 1953ರಲ್ಲಿ ಉತ್ತರದ ಚಂಡಮಾರುತವೊಂದು ಬೀಸಿ ಒಡ್ಡುಗಳು ಬಿರುಕುಬಿಟ್ಟವು. ಎಷ್ಟೋ ಒಳ್ಳೆಯ ಜಮೀನಿಗೆ ಕಡಲ ನೀರು ನುಗ್ಗಿತು. ಈಗ ಇದನ್ನು ದುರಸ್ತು ಮಾಡಲಾಗಿದೆ. ಸಮುದ್ರದ ನೀರಿನಿಂದ ಸಂಭವಿಸಿದ ಕ್ಷಾರ ಕ್ರಮೇಣ ಕಡಿಮೆಯಾಗುತ್ತಿದೆ. ಇದರ ಫಲವಾಗಿ ಇನ್ನೂ ಮಹತ್ತ್ವಾಕಾಂಕ್ಷೆಯ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಹಾಲೆಂಡಿನ ಫ್ಲಷಿಂಗ್ ಮತ್ತು ಹುಕ್ ಆಫ್ ಹಾಲೆಂಡ್ ನಡುವಣ ಅಳಿವೆಗಳಿಗೆ ಕಟ್ಟೆಯನ್ನು ಕಟ್ಟುವ ಮಹಾ ಮುಖಜಭೂಮಿ ಯೋಜನೆಯನ್ನು ಜಾರಿಗೆ ಕೊಡಲಾಗಿದೆ. ಹೆಚ್ಚು ನೆಲವನ್ನು ಉದ್ಧರಿಸುವುದೂ ಇರುವ ನೆಲಕ್ಕೆ ಹೆಚ್ಚಿನ ರಕ್ಷಣೆ ನೀಡುವುದೂ ಈ ಯೋಜನೆಯ ಉದ್ದೇಶ.

	ಕೈಗಾರಿಕೆ: ಡಚ್ ಕೈಗಾರಿಕಾಭಿವೃದ್ಧಿ ತಡವಾಗಿ ಆರಂಭವಾಯಿತು (1870). ಎರಡನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ತೀವ್ರವಾಗಿ ಮುನ್ನಡೆಯುತ್ತಿದೆ. ಲೋಹ ತಯಾರಿಕೆ ಅತ್ಯಂತ ಪ್ರಮುಖ ಕೈಗಾರಿಕೆ. ಆಹಾರ, ಪಾನೀಯ ಮತ್ತು ತಂಬಾಕು ಕೈಗಾರಿಕೆಗಳಿಗೆ ಎರಡನೆಯ ಸ್ಥಾನ. ವಾಣಿಜ್ಯ ವಿಮಾನ ಮತ್ತು ವಾಹನ ತಯಾರಿಕೆಗಳೂ ಅಭಿವೃದ್ಧಿ ಹೊಂದಿವೆ.	(ಎಲ್.)

	ವಾಣಿಜ್ಯ: ಮಧ್ಯಯುಗದ ಕೊನೆಯ ಭಾಗದಿಂದಲೂ ರೈನ್ ಮುಖಜ ಭೂಮಿ ಪ್ರದೇಶ ಮಧ್ಯಯ ಯೂರೋಪಿನ ಮುಖ್ಯ ವ್ಯಾಪಾರದ್ವಾರಗಳಲ್ಲೊಂದಾಗಿದೆ. 16ನೆಯ ಶತಮಾನದ ಕೊನೆಯಲ್ಲಿ ಸ್ಪೇನಿನಿಂದ ಧಾರ್ಮಿಕ ಹಾಗೂ ರಾಜಕೀಯ ವಿಮೋಚನೆ ಹೊಂದಲು ನೆದರ್ಲೆಂಡ್ಸ್ ಹೋರಾಟ ನಡೆಸಿತು. ಪ್ರಮುಖ ನಾಗರಿಕ ರಾಷ್ಟ್ರಗಳಲ್ಲೊಂದಾಗಿ ಅದು ಪರಿಣಮಿಸಿತು. ದಕ್ಷಿಣ ಮತ್ತು ಆಗ್ನೇಯ ಏಷ್ಯದೊಂದಿಗೆ ಭೋಗವಸ್ತುಗಳ ವ್ಯಾಪಾರದಲ್ಲಿ ಇಂಗ್ಲೆಂಡಿನೊಂದಿಗೆ ಸ್ಪರ್ಧಿಸಿತು. ಇದು ಪ್ರಮುಖ ವಸಾಹತುಶಾಹಿ ರಾಷ್ಟ್ರವಾಗಿ 1950ರವರೆಗೂ ಮುಂದುವರಿಯಿತು. ಈಗ ಇಂಡೊನೇಷ್ಯ ಎನಿಸಿಕೊಂಡಿರುವ ಡಚ್ ಈಸ್ಟ್ ಇಂಡೀಸಿನಲ್ಲಿ ಹಣಬೆಳೆಗಳನ್ನು ಅಭಿವೃದ್ಧಿಗೊಳಿಸಿತು. ರೈನ್ ಮುಖಜಭೂಮಿಯ ಮೂಲಕ ಸಾಗುತ್ತಿದ್ದ ಮಧ್ಯ ಯೂರೋಪಿನ ವ್ಯಾಪಾರದಿಂದಾಗಿಯೂ ವಸಾಹತುಶಾಹಿಯಿಂದಾಗಿಯೂ ನೆದರ್ಲೆಂಡಿನಲ್ಲಿ ಹಲವು ಮಹಾರೇವು ಪಟ್ಟಣಗಳು ವಾಣಿಜ್ಯ ನಗರಗಳೂ ಬೆಳೆದಿವೆ. ಇವುಗಳ ಪೈಕಿ ಮುಖ್ಯವಾದವು ಆಮ್ಸ್‍ಟರ್ ಡ್ಯಾಮ್ (8,20,406 (1970. ಅಂ), ರಾಟರ್ ಡ್ಯಾಮ್ (6,86,586) ಮತ್ತು ದಿ ಹೇಗ್ (ಡಚ್: ಕ್ರಾವನ್‍ಹಾಗ್) (5,50,613). ಕಳೆದ ಒಂದೆರಡು ದಶಕಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಐರೋಪ್ಯ ಸಾಮಾನ್ಯ ಮಾರುಕಟ್ಟೆಯ ಉತ್ತೇಜನದಿಂದಾಗಿ ಹಾಲೆಂಡಿನಲ್ಲಿ ಕೈಗಾರಿಕಾಕರಣ ಹಾಗೂ ನಗರೀಕರಣದ ವೇಗ ಹೆಚ್ಚಿದೆ.

	ಡಚ್ ನಾಣ್ಯ ನೆದರ್ಲೆಂಡ್ಸ್ ಗುಲ್ಡನ್ ಅಥವಾ ಫ್ಲಾರಿನ್. ಇದನ್ನು 100 ಸೆಂಟುಗಳಾಗಿ ವಿಭಾಗ ಮಾಡಲಾಗಿದೆ.
ಇತಿಹಾಸ

	ಪ್ರಾಗಿತಿಹಾಸ: ಪೂರ್ವಶಿಲಾಯುಗ: ಸುಮಾರು 30,000 ವರ್ಷಗಳ ಹಿಂದಿನ ಮಾನವನ ಅವಶೇಷಗಳು ಕ್ಲಾಕ್ಟೋನಿಯನ್ ಚಕ್ಕೆ ಕಲ್ಲಿನ ಆಯುಧಗಳ ಮತ್ತು ಅಷ್ಯೂಲಿಯನ್ ಕೈಗೊಡಲಿಗಳ ರೂಪದಲ್ಲಿ ನೆದರ್ಲೆಂಡ್ಸಿನ ದಕ್ಷಿಣಭಾಗದಲ್ಲಿ ದೊರಕುತ್ತವೆ. ಆದ್ದರಿಂದ ಮಧ್ಯಪ್ಲೀಸ್ಟೋಸೀನ್ ಯುಗದಲ್ಲೇ ಈ ಭಾಗದಲ್ಲಿ ಮಾನವನ ವಾಸಿಸುತ್ತಿದ್ದುದು ಸ್ಪಷ್ಟವಾಗುತ್ತದೆ. ಪೂರ್ವಶಿಲಾಯುಗದ ಮಧ್ಯಕಾಲಕ್ಕೆ (ಕ್ರಿ.ಪೂ. 150000-50000) ನಿರ್ದೇಶಿಸಬಹುದಾದ ಮೌಸ್ಟೀರಿಯನ್ ಸಂಸ್ಕøತಿಗೆ ಸೇರಿದ ಆಯುಧಗಳು ಮತ್ತು ನಿಯಾಂಡರ್ತಲ್ ಸಂತತಿಗೆ ಸೇರಿದ ಮಾನವ ದೇಹದ ಪಳೆಯುಳಿಕೆಗಳು ಈ ಪ್ರದೇಶದ ಹಲವು ಗುಹೆಗಳಲ್ಲಿ ಕಂಡುಬಂದಿವೆ. ನಿಯಾಂಡರ್ತಲ್ ಮಾನವ ಹೆಚ್ಚಾಗಿ ಶೀತ ಪ್ರದೇಶಗಳಲ್ಲಿ ವಾಸಿಸುತ್ತ ಚಕ್ಕೆಕಲ್ಲಿನ ಆಯುಧಗಳಿಂದ ಬೇಟೆಯಿಂದಲೂ ಇತರ ರೀತಿಯಲ್ಲೂ ಆಹಾರ ಸಂಗ್ರಹಣೆ ಮಾಡಿ ವಾಸಿಸುತ್ತಿದ್ದ ಸಂಗತಿ ಈ ಅವಶೇಷಗಳಿಂದ ತಿಳಿದುಬರುತ್ತದೆ. ಪೂರ್ವಶಿಲಾಯುಗದ ಅಂತ್ಯಕಾಲಕ್ಕೆ ಸೇರುವ 9ಕ್ರಿ.ಪೂ. 50000-10000), ಆಧುನಿಕ ಮಾನವ ವಂಶಕ್ಕೆ ಸೇರಿದ ಕ್ರೋಮ್ಯಾಗ್ನಾನ್ ಮಾನವನ ಆಯುಧೋಪಕರಣಗಳು ಈ ಪ್ರದೇಶದಲ್ಲೆಲ್ಲ ದೊರಕಿವೆ. ಈ ಸಂತತಿಯ ಮಾನವರು ಹಿಮಸಾರಂಗದ ಬೇಟೆ, ಮೀನುಗಾರಿಕೆ ಮತ್ತು ಸಸ್ಯಮೂಲ ಆಹಾರ ಸಂಗ್ರಹಣೆಯಿಂದ ಜೀವಿಸುತ್ತಿದ್ದನು. ಇವರ ಆಯುಧೋಪಕರಣಗಳು ಬಹಳ ಮಟ್ಟಿಗೆ ಉತ್ತರ ಜರ್ಮನಿ ಪ್ರದೇಶದಲ್ಲಿದ್ದ ಹ್ಯಾಂಬರ್ಗಿಯನ್ ಸಂಸ್ಕøತಿಯವನ್ನು ಹೋಲುತ್ತವೆ. ಕರಾವಳಿ ಪ್ರದೇಶದಲ್ಲಿ ಪೂರ್ವಶಿಲಾಯುಗದ ಅಂತ್ಯಕಾಲದ ಕಲೆ ಕಂಡುಬರುವುದಿಲ್ಲವಾದರೂ ಫ್ರೆಂಚ್ ಶೈಲಿಯಲ್ಲಿ ಅಲಂಕರಿಸಲಾದ ಕೆಲವು ವಸ್ತುಗಳು ಮತ್ತು ಶಿಲಾಫಲಕಗಳು ದೊರಕಿವೆ. ಪೂರ್ವಶಿಲಾಯುಗದ ಕೊನೆಯ ಭಾಗದಲ್ಲಿ (ಕ್ರಿಪೂ 9000-8000) ಕರಾವಳಿ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ಮೂರು ಸಂಸ್ಕøತಿಗಳಲ್ಲಿ ಬ್ರಿಟನ್ನಿನ ಚೆಡ್ಡರ್ ಮತ್ತು ಕ್ರೆಸ್‍ವಿಲಿಯನ್ ಸಂಸ್ಕøತಿಗಳನ್ನು ಹೋಲುವ ಜಾರಿಗರ್ ಸಂಸ್ಕøತಿಯೂ (ಫ್ರಿಸೀಯ ಪ್ರಾಂತ್ಯದಲ್ಲಿ) ಜರ್ಮನಿಯ ಹ್ಯಾಂಬರ್ಗಿಯನ್ ಸಂಸ್ಕøತಿಯನ್ನು ಹೋಲುವ ಅರೆನ್ಸ್‍ಬರ್ಗ ಸಂಸ್ಕøತಿಯೂ ಪ್ರಸಾರದಲ್ಲಿದ್ದವು.

	ಮಧ್ಯಶಿಲಾಯುಗ: ಮಧ್ಯಶಿಲಾಯುಗ ಕಾಲದಲ್ಲಿ (ಕ್ರಿ.ಪೂ. 8000-4000) ಇಲ್ಲಿಯ ನದಿ ಮತ್ತು ಸರೋವರ ದಂಡೆಗಳಲ್ಲಿ ಮೂಳೆ ಮತ್ತು ಹಿಮಸಾರಂಗದ ಕೊಂಬುಗಳಿಂದ ತಯಾರಿಸಲಾದ ಆಯುಧಗಳನ್ನು ಬಳಸುತ್ತಿದ್ದ. ಈಟಿಗಾಳದ ಹಾಯದಿಂದ ಮೀನು ಮೊಸಳೆಗಳನ್ನು ಹಿಡಿದು ಹೊಟ್ಟೆಹೊರೆದುಕೊಳ್ಳುತ್ತಿದ್ದ ಮೆಗ್ಲೆ ಮೊಸಿಯನ್ ಜನ ವಾಸಿಸುತ್ತಿದ್ದರು. ಮೀನು ಹಿಡಿಯಲು ಮರದ ತೋಡು ದೋಣಿಗಳನ್ನು ಉಪಯೋಗಿಸುತ್ತಿದ್ದರು. ಇದೇ ಕಾಲದ ಮತ್ತೊಂದು ಸಂಸ್ಕøತಿಯ ಟಾರ್ಡೆನಾಸಿಯನ್ ಜನ ಮರ, ಮೂಳೆ ಅಥವಾ ಕೊಂಬಿನ ಹಿಡಿಕೆಗಳಲ್ಲಿ ಸೂಕ್ಷ್ಮಶಿಲಾಯುಧಗಳನ್ನು ಅಂಟಿಸಿ ತಯಾರಿಸಲಾದ ಬಾಣ, ಈಟಿ ಮುಂತಾದ ಹಲವು ನೇತಿಯ ಸಂಯುಕ್ತ ಆಯುಧಗಳಿಂದ ಸಣ್ಣ ಪ್ರಾಣಿಗಳ ಬೇಟೆಯಾಡಿ ಜೀವಿಸುತ್ತಿದ್ದರು. ಭಾರವಾದ ಕೊಡಲಿ ಮತ್ತು ಮಚ್ಚಿನಂಥ ಆಯುಧಗಳನ್ನು ಬಳಸುತ್ತಿದ್ದ ಜನರು ಇದೇ ಕಾಲದಲ್ಲಿ ಉತ್ತರದ ಅರಣ್ಯ ಪ್ರದೇಶಗಳಲ್ಲಿ ಪೂರ್ವಶಿಲಾಯುತಿದ ಪಳೆಯುಳಿಕೆಗಳಂತೆ ಉಳಿದು ಬಂದಿದ್ದಕ್ಕೆ ಆಧಾರಗಳಿವೆ.

	ನವಶಿಲಾಯುಗ: ಕ್ರಿ.ಪೂ. 5ನೆಯ ಸಹಸ್ರಮಾನದ ಅಂತ್ಯಭಾಗದಲ್ಲಿ ಆಹಾರೋತ್ಪಾದಕರಾದ ಕೃಷಿಕ ಜನಾಂಗ ಮಧ್ಯ ಯೂರೋಪಿನ ಡ್ಯನೈಬ್ ನದಿ ಬಯಲಿನಿಂದ ಈ ಪ್ರದೇಶಕ್ಕೆ ಬಂದುದಾಗಿ ತಿಳಿದುಬರುತ್ತದೆ. ಲಿಂಬರ್ಗ ಪ್ರದೇಶದಲ್ಲಿ ನೆಲೆಸಿದ ಈ ಜನರು ವ್ಯವಸಾಯ ಮತ್ತು ಪಶುಸಂಗೋಪನೆಯಲ್ಲಿ ನಿರತರಾಗಿದ್ದರು. ಮರದ ದಿಮ್ಮಿಗಳಿಂದ ಉದ್ದವಾದ ಮನೆ ಕೊಟ್ಟಿಗೆ ಮತ್ತು ಕಣಜಗಳನ್ನು ಕಟ್ಟುತ್ತಿದ್ದರು. ಕಾಡುಗಳನ್ನು ಕಡಿದು ಬೆಂಕಿಯಿಂದ ಸುಟ್ಟು ತೆರಪಾಗಿಸಿದ ಪ್ರದೇಶಗಳಲ್ಲಿ ಧಾನ್ಯಗಳನ್ನು ಬೆಳೆಯುತ್ತಿದ್ದರು. ಹಂದಿ ಕುರಿ ಮತ್ತು ದನಗಳನ್ನು ಸಾಕುತ್ತಿದ್ದರು. ಇವರು ನುಣುಪುಗೊಳಿಸಿದ ಕಲ್ಲು ಕೊಡಲಿಗಳನ್ನೂ ಕೊರೆದ ರೇಖೆಗಳಿಂದ ಅಲಂಕೃತವಾದ ಮಡಕೆಗಳನ್ನೂ ಬಳಸುತ್ತಿದ್ದರು. 3 ನೆಯ ಸಹಸ್ರಮಾನದಲ್ಲಿ ಮಧ್ಯಯೂರೋಪಿನಿಂದ ವಲಸೆ ಬಂದ ಲಾಳಿಕೆ ಕೊಕ್ಕು ಪಾತ್ರೆಗಳನ್ನು ಉಪಯೋಗಿಸುತ್ತಿದ್ದ ಜನರು (ಫನೆಲ್ ಬಿ ಕರ್ ಫೋಕ್ ) ನವಶಿಲಾಯುಗದ ಬೇರೊಂದು ಸಂಸ್ಕøತಿಯೊಂದಿಗೆ ವಲಸೆ ಬಂದು ಇಲ್ಲಿ ನೆಲಸಿದರು. ಈ ಜನರು ಇಲ್ಲಿ ಹೇರಳವಾಗಿ ದೊರಕುತ್ತಿದ್ದ ಚಕಮಕಿ ಕಲ್ಲನ್ನು ಅಗೆದು ಬೇರೆ ಪ್ರದೇಶಗಳಿಗೆ ರಫ್ತು ಮಾಡುತ್ತಿದ್ದರು. ಈ ಸಂಸ್ಕøತಿಯ ಅವಶೇಷಗಳು ಪೂರ್ವಭಾಗದಲ್ಲಿ ಹೆಚ್ಚಾಗಿ ಕಾಣಬರುತ್ತವೆ. ಇವರು ಸತ್ತವರ ದೇಹಗಳನ್ನು ಬೃಹಚ್ಛಿಲಾ ಕೋಣೆಗೋರಿಗಳಲ್ಲಿ ಹೂಳುತ್ತಿದ್ದರು. ಉತ್ತರ ಸಮುದ್ರದ ಕರಾವಳಿ ಪ್ರದೇಶದಲ್ಲಿ ನಡೆದ ಉತ್ಖನನಗಳಲ್ಲಿ ಅನೇಕ ವ್ಯವಸಾಯಗಾರರ ಮತ್ತು ಮೀನುಗರರ ವಸತಿಗಳು ಕಂಡುಬಂದಿವೆ. ಬಹುಶಃ ಈ ಭಾಗದಲ್ಲಿ ಸ್ಥಳೀಯ ಮಧ್ಯ ಶಿಲಾಯುಗ ಸಂಸ್ಕøತಿಯ ಜನರು ಈ ಪರಕೀಯ ನವಶಿಲಾಯುಗ ಸಂಸ್ಕøತಿಯನ್ನು ಅಳವಡಿಸಿಕೊಂಡರೆಂದು ಹೇಳಬಹುದು. ನವಶಿಲಾಯುಗ ಸಂಸ್ಕøತಿಯ ಕೊನೆಗಾಲದಲ್ಲಿ ಬೇರೆ ಭಾಗಗಳಿಂದ ನಡೆದ ಆಕ್ರಮಣಗಳ ಮತ್ತು ವಲಸೆಗಳ ಪ್ರಭಾವದಿಂದ ನೆದರ್ಲೆಂಡ್ಸಿನ ಸಂಸ್ಕøತಿ ಆಘಾತಗಳಿಗೆ ಒಳಗಾಯಿತು. ಕ್ರಿ.ಪೂ. 2200ರ ಸುಮಾರಿನಲ್ಲಿ ಪೂರ್ವದೇಶಗಳಿಂದ ಅಲೆಮಾರಿ ತುರುಗಾಹಿ ತಂಡದ ಜನರು ಬಂದು ಉತ್ತರದ ಮರಳ್ಗಾಡಿನ ಪಶ್ಚಿಮಭಾಗದಲ್ಲಿ ನೆಲಸಿದರು. ಇವು ಕಲ್ಲಿನಲ್ಲಿ ಮಾಡಿದ ಗಂಡುಗೊಡಲಿ ಅಥವಾ ಪರಶುಗಳನ್ನೂ ಹಗ್ಗದ ಮಾದರಿಯಲ್ಲಿ ಕೊರೆದ ಅಲಂಕರಣ ಚಿಹ್ನೆಗಳನ್ನು ಹೊಂದಿದ್ದ ಮಡಕೆಗಳನ್ನೂ ಬಳಸುತ್ತಿದ್ದರಲ್ಲದೆ ಸತ್ತವರ ದೇಹಗಳನ್ನು ಮಣ್ಣಿನ ದಿಬ್ಬಗಳ ಕೆಳಗಿನ ಗುಂಡಿಗಳಲ್ಲಿ ಹೂಳುತ್ತಿದ್ದರು. ಕ್ರಿ.ಪೂ. 2000ದ ಸುಮಾರಿಗೆ ಘಂಟೆಯಾಕಾರದ ಕೊಕ್ಕುಪಾತ್ರೆಗಳನ್ನು (ಬೆಲ್-ಬೀಕರ್) ಬಳಸುತ್ತಿದ್ದ ಮತ್ತೊಂದು ಜನಾಂಗದವರು ಲೋಹಗಳ ಅನ್ವೇಷಣೆಯಲ್ಲಿ ಇಲ್ಲಿಗೆ ಬಂದು ಕರಾವಳಿ ಮತ್ತು ಪೂರ್ವಪ್ರದೇಶದಲ್ಲಿ ನೆಲಸಿದರು. ನೆದರ್ಲೆಂಡಿನಲ್ಲಿ ಲೋಹಗಳ ಬಳಕೆಯನ್ನು ಆರಂಭಿಸಿದರು ಇವರು.

	ಕಂಚಿನ ಯುಗ: (ಕ್ರಿ.ಪೂ. 1600-600). ಇಲ್ಲಿ ಮೊದಲಿಗೆ ಹೆಚ್ಚಿನ ಚಟುವಟಿಕೆಗಳು ಕಂಡುಬರದಿದ್ದರೂ, ಮರದ ಹಲಗೆಗಳಿಂದ ನಿರ್ಮಿಸಿದ ಕೋಣೆಗೋರಿಗಳಲ್ಲಿ ಹೂಳುತ್ತಿದ್ದ ಸಂಸ್ಕøತಿಯ ಜನರು ಕ್ರಮೇಣ ಇಲ್ಲಿ ಪ್ರಬಲರಾದರು. ಬ್ರಿಟನ್ನಿನಿಂದ ವಲಸೆ ಬಂದ, ಸತ್ತವರ ದೇಹಗಳನ್ನು ಸುಟ್ಟು ಅವರ ಬೂದಿಮೂಳೆಗಳನ್ನು ಜಾಡಿಗಳಲ್ಲಿ ಹುಗಿದಿಡುತ್ತಿದ್ದ ಜನಾಂಗದವರು ಅನಂತರದ ಕಾಲದಲ್ಲಿ ಉತ್ತರ ಭಾಗದಲ್ಲಿ ನೆಲಸಿದರು. ಇವು ಉತ್ತರ ಮತ್ತು ಪೂರ್ವ ಯೂರೋಪ್‍ಗಳಿಂದ ಕಂಚಿನ ಆಯುಧಸಾಮಗ್ರಿಗಳನ್ನು ತರಿಸುತ್ತಿದ್ದರು. ಅಲ್ಲಿಯ ಹಿಂದಿನ ಸಂಸ್ಕøತಿಗಳು ಇವರ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತದೆ.

	ಕಬ್ಬಿಣ ಯುಗ: ಈ ಯುಗದ ಕಾಲದಲ್ಲಿ (ಕ್ರಿ.ಪೂ. 600-12) ವ್ಯವಸಾಯ ಮತ್ತು ಪಶುಸಂಗೋಪನೆ ಪ್ರಗತಿ ಹೊಂದಿದುವು. ಪ್ರಿಸಿಯದ ಕರಾವಳಿ ಪ್ರದೇಶಕ್ಕೂ ಜನವಸತಿ ಹರಡಿತು. ಈ ಜನರು ತೀರಪ್ರದೇಶದಲ್ಲಿ ಸಮುದ್ರದ ಅಲೆಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ತಮ್ಮ ಗ್ರಾಮಗಳನ್ನು ಕೃತಕ ದಿಬ್ಬಗಳ ಮೇಲೆ ನಿರ್ಮಿಸುತ್ತಿದ್ದರು. ಮಧ್ಯಯೂರೋಪಿನಿಂದ ವಲಸೆ ಬಂದ ಹಾಲ್‍ಸ್ಟ್ಯಾಟ್ ಸಂಸ್ಕøತಿ ಒಳನಾಡು ಪ್ರದೇಶಗಳಲ್ಲಿ ಪ್ರಬಲವಾಯಿತು. ತಮ್ಮ ಆಡಳಿತವನ್ನು ನೆಲೆಗೊಳಿಸಿದ ಈ ಜನರು ಮೆಡಿಟರೇನಿಯನ್ ಪ್ರದೇಶದೊಂದಿಗೆ ವ್ಯಾಪಾರ ಸಂಪರ್ಕ ಇರಿಸಿಕೊಂಡಿದ್ದರು. ಅನಂತರದ ಲಾ-ಟಿನೆ ಸಂಸ್ಕøತಿಯ ಕಾಲದಲ್ಲಿ ಫ್ರೆಂಚ್ ಸಂಸ್ಕøತಿಯ ಪ್ರಭಾವ ತಲೆದೋರಿತು. ಕ್ರಿ.ಪೂ. 12ರಲ್ಲಿ ರೋಮನರು ನೆದರ್ಲೆಂಡ್ಸ್ ಪ್ರದೇಶವನ್ನು ವಶಪಡಿಸಿಕೊಂಡರು.
(ಬಿ.ಕೆ.ಜಿ.)

	ಇತಿಹಾಸ: ನೆದರ್ಲೆಂಡ್ಸ್ ಚರಿತ್ರೆ ಜ್ಯೂಲಿಯಸ್ ಸೀಸರನ ಕಾಲದಲ್ಲಿ ಪ್ರಾರಂಭವಾಗುತ್ತದೆ. ರೋಮನರು ಕ್ರಿ.ಪೂ. 57ರಲ್ಲಿ ಗಾಲ್‍ನ ಉತ್ತರ ಗಡಿ ಸೀಮೆಯನ್ನು ಪ್ರವೇಶಿಸಿದ್ದರು. ಅವರು ದಕ್ಷಿಣಭಾಗದಲ್ಲಿ ರೈನ್ ನದಿಯವರೆಗೆ ಹರಡಿದ್ದರು. ಅವರ ಆಕ್ರಮಣ ಕ್ರಿ.ಶ. ಸುಮಾರು 400ವರೆಗೆ ಮುಂದುವರಿಯಿತು. ಅನಂತರ ದೇಶ ಸಂಪೂರ್ಣವಾಗಿ ಫ್ರಾಂಕರ ಹತೋಟಿಗೆ ಒಳಪಟ್ಟಿತು. 

	15ನೆಯ ಶತಮಾನದ ಮರ್ಧಯದಲ್ಲಿ ನೆದರ್ಲೆಂಡ್ಸ್ ಬರ್ಗಂಡಿಯ ಡ್ಯೂಕರಿಗೆ ಸೇರಿತು. ಪವಿತ್ರ ರೋಮನ್ ಸಾಮ್ರಾಜ್ಯದ ಉತ್ತರಾಧಿಕಾರಿ ಮೊದಲನೆಯ ಮ್ಯಾಕ್ಸಿಮಿಲಿಯನನನ್ನು ಬರ್ಗಂಡಿಯ ಮೇರಿ 1477ರಲ್ಲಿ ವಿವಾಹವಾದಳು. ನೆದರ್ಲೆಂಡ್ಸ್ ಹ್ಯಾಪ್ಸ್‍ಬರ್ಗ್ ಮನೆತನಕ್ಕೆ ಸೇರಿತು. 1555ರಲ್ಲಿ 5ನೆಯ ಚಾಲ್ರ್ಸ್ ಸಿಂಹಾಸನಾತ್ಯಾಗ ಮಾಡಿದ ಮೇಲೆ ಸ್ಪೇನಿನ ದೊರೆ 2ನೆಯ ಫಿಲಿಪ್‍ಗೆ ನೆದರ್ಲೆಂಡ್ಸ್ ಸೇರಿತು. ನೆದರ್ಲೆಂಡ್ಸಿನ ಪ್ರಜೆಗಳಾದ ಡಚ್ಚರು ಸ್ಪೇನಿನ ಆಡಳಿತದ ವಿರುದ್ಧ 1568ರಿಂದ 1648ರವರೆಗೆ 80 ವರ್ಷಗಳ ಕಾಲ ಯುದ್ಧಮಾಡಿದರು. ಈ ಹೋರಾಟ ರಾಜಕೀಯ ಸ್ವಾತಂತ್ರಕ್ಕಾಗಿ ಮಾತ್ರವಲ್ಲ, ಧಾರ್ಮಿಕ ಸ್ವಾತಂತ್ರ್ಯಕ್ಕೂ ಆಗಿತ್ತು. ಡಚ್ಚರು ಪ್ರಾಟೆಸ್ಟಂಟ್ ಮತಾವಲಂಬಿಗಳಾಗಿದ್ದರು. ಡಚ್ ಪಟ್ಟಣಗಳು ಕೈಗಾರಿಕೆ ಮತ್ತು ವ್ಯಾಪಾರದ ಪ್ರಸಿದ್ಧಕೇಂದ್ರಗಳಾಗಿದ್ದವು. ಅವರು ಸ್ಪೇನಿನ ಹಾಲೆಂಡ್ ಮತ್ತು ಜೀಲೆಂಡ್ ಸ್ಪೇನಿನ ಮತೀಯ ಕಿರುಕುಳವನ್ನು ತಡೆಯಲಾಗದೆ ದಂಗೆ ಎದ್ದವು. 1579ರಲ್ಲಿ ಉತ್ತರದ ಹಾಲೆಂಡ್, ಜೀಲೆಂಡ್, ಯೂಟ್ರೆಕ್ಟ್, ಗ್ರೋನಿಂಜೆನ್, ಗೆಲ್ಡರ್‍ಲೆಂಡ್ ಮತ್ತು ಇತರ ಕೆಲವು ಪ್ರದೇಶಗಳು ಯೂಟ್ರೆಕ್ಟ್ ಒಕ್ಕೂಟವನ್ನು ಮಾಡಿಕೊಂಡವು. ಎರಡು ವರ್ಷಗಳ ನಂತರ ಸ್ವಾತಂತ್ರ್ಯ ಘೋಷಣೆ ಮಾಡಿದವು. ಈ ಚಳವಳಿಯಲ್ಲಿ ಆರೆಂಜ್ ರಾಜಕುಮಾರ ವಿಲಿಯಮ್ ಮುಖಂಡ. ಈತ ಪ್ರಸಿದ್ಧವಾದ ಆರೆಂಜ್ ಮನೆತನವನ್ನು ಸ್ಥಾಪಿಸಿದ. ವಿಲಿಯಂ 1584ರ ಜೂನ್ 10ರಂದು ಕೊಲೆಯಾದ. ಅನಂತರ ಈತನ ಮಗ ಮಾರಿಸ್ ಹಾಲೆಂಡಿನ ಆಡಳಿತಗಾರನಾದ. ಈತನ ಕಾಲದಲ್ಲಿ ಡಚ್ ನೌಕಾಧಿಕಾರಿಗಳು ಸ್ಪೇನಿನ ದೊರೆ 2ನೆಯ ಫಿಲಿಪ್ಪನ ವಿರುದ್ಧ ಅನೇಕ ಹೋರಾಟ ನಡೆಸಿದರು. 1648ರ ವೆಸ್ಟ್ ಫೇಲಿಯ ಒಪ್ಪಂದದ ಪ್ರಕಾರ ಒಂದು ರಾಷ್ಟ್ರದ ಪ್ರಜೆಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮತ್ತು ತಮಗೆ ಬೇಕಾದ ಸರ್ಕಾರವನ್ನು ರಚಿಸಿಕೊಳ್ಳುವ ಹಕ್ಕನ್ನು ಪಡೆದರು. ಆರೆಂಜಿನ ರಾಜಕುಮಾರ ಡಚ್ ಗಣರಾಜ್ಯದಲ್ಲಿ ಸ್ಪಾಡ್ ಹೋಲ್ಡರ್ ಎಂಬ ಬಿರುದನ್ನು ಪಡೆದು ಅದರ ಮುಖ್ಯ ದಂಢಾಧಿಕಾರಿಯೂ ಆದ. ಆತನಿಗೆ ಪರಮಾಧಿಕಾರವಿರಲಿಲ್ಲ. ನೆದರ್ಲೆಂಡ್ಸಿನ ಪಾರ್ಲಿಮೆಂಟ್ ಸ್ಟೇಟ್ಸ್ ಜನರಲ್ ಸಾರ್ವಭೌಮಾಧಿಕಾರ ಹೊಂದಿದ್ದು, ಸ್ಟಾಡ್ ಹೋಲ್ಡರ್ ಅದರ ಸೇವಕನಾಗಿದ್ದ.

	ಡಚ್ ರಾಜ್ಯ 17ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿ ಮುಟ್ಟಿತು. ಈ ಶತಮಾನದಲ್ಲಿ ಡಚ್ಚರು ಈಸ್ಟ್ ಇಂಡೀಸ್, ಸಿಂಹಳ, ದಕ್ಷಿಣ ಆಫ್ರಿಕ, ಬ್ರಜಿಲ್, ಜಪಾನ್ ಮುಂತಾದ ಕಡೆಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಇದರಿಂದ ಡಚ್ಚರ ಐಹಿಕ ಏಳಿಗೆಯಾಯಿತಲ್ಲದೆ ಕಲೆ ಮತ್ತು ವಿಜ್ಞಾನ ಅಭಿವೃದ್ಧಿ ಹೊಂದಿದವು. ಈ ಶತಮಾನದಲ್ಲಿ ಹಾಲೆಂಡಿನ ವಾಣಿಜ್ಯವೂ ನೌಕಾಬಲವೂ ವಿಶೇಷವಾಗಿ ಬೆಳೆದುವು.

	1795ರಲ್ಲಿ ನೆದರ್ಲೆಂಡ್ಸ್ ಸಂಪೂರ್ಣವಾಗಿ ಫ್ರಾನ್ಸಿನ ಹತೋಟಿಗೆ ಬಂತು. ಅಮೆರಿಕನ್ ಕ್ರಾಂತಿಯಿಂದ ಡಚ್ಚರು ಜನಾನುರಾಗಿ ಸರ್ಕಾರದ ಮಹತ್ತ್ವವನ್ನು ಅರಿತರು. 1810ರಲ್ಲಿ ನೆದರ್ಲೆಂಡ್ಸ್ ಫ್ರಾನ್ಸಿನ ಭಾಗವಾಯಿತು. ಐಕಮತ್ಯವಿಲ್ಲದಿದ್ದರೆ ದೇಶ ಉಳಿಯಲಾರದೆಂಬುದನ್ನು ಡಚ್ಚರು ನೆಪೋಲಿಯನ್ನನ ಆಳ್ವಿಕೆಯಲ್ಲಿ ಮನಗಂಡರು. ಡಚ್ಚರಲ್ಲಿ ರಾಷ್ಟ್ರೀಯತೆಯ ಮನೋಭಾವ ಉದ್ಭವಿಸಿತು. 1814ರಲ್ಲಿ ನೆಪೋಲಿಯನ್ನನ ಪತನದ ಅನಂತರ ನೆದರ್ಲೆಂಡ್ಸಿನಲ್ಲಿ ಆರೆಂಜ್ ಮನೆತನದ ಆಳ್ವಿಕೆಯನ್ನು ಪುನಃ ಸ್ಥಾಪಿಸಲಾಯಿತು. 1815ರಲ್ಲಿ ವಿಯೆನ್ನ ಕಾಂಗ್ರೆಸ್‍ನಲ್ಲಿ ಹಾಲೆಂಡ್ ಮತ್ತು ಬೆಲ್ಜಿಯಂಗಳನ್ನು ಒಟ್ಟುಗೂಡಿಸಿ ನೆದರ್ಲೆಂಡ್ಸ್ ಸಂಯುಕ್ತ ರಾಜ್ಯವನ್ನು ಸ್ಥಾಪಿಸಲಾಯಿತು. 1ನೆಯ ವಿಲಿಯಂ ಗಣರಾಜ್ಯದ ಮುಖಂಡನಾದ.

	ಹಾಲೆಂಡ್ ಮತ್ತು ಬೆಲ್ಜಿಯಮ್‍ಗಳ ಒಕ್ಕೂಟ ಅಸ್ವಾಭಾವಿಕವಾಗಿತ್ತು. ಡಚ್ಚರ ಮತ್ತು ಬೆಲ್ಜಿಯನರ ಭಾಷೆಗಳು ಮತಗಳೂ ಬೇರೆಬೇರೆಯಾಗಿದ್ದವು. ಡಚ್ಚರು ಪ್ರಾಟೆಸ್ಟಂಟರಾಗಿದ್ದರೆ ಬೆಲ್ಜಿಯನ್ನರು ಕ್ಯಾತೊಲಿಕರು. ಅವರ ಆರ್ಥಿಕ ಜೀವನ ಮತ್ತು ತತ್ತ್ವಗಳು ಬೇರೆಬೇರೆಯಾಗಿದ್ದವು. ಡಚ್ಚರು ಮುಖ್ಯವಾಗಿ ವ್ಯವಸಾಯಗಾರರು ಮತ್ತು ಮುಕ್ತ ವ್ಯಾಪಾರದ ಪ್ರತಿಪಾದಕರಾಗಿದ್ದರು. ಬೆಲ್ಜಿಯನರು ಸಿದ್ಧವಸ್ತುಗಳನ್ನು ತಯಾರಿಸುವವರಾಗಿದ್ದರು. ಕೈಗಾರಿಕೆಗಳಿಗೆ ರಕ್ಷಣೆಯ ನೀತಿಯನ್ನು ಅನುಸರಿಸಬೇಕೆಂಬುದು ಅವರ ಮತ. ಮೊದಲಿನಿಂದಲೂ ಈ ಒಕ್ಕೂಟ ಯಶಸ್ವಿಯಾಗಲಿಲ್ಲ. 1830ರಲ್ಲಿ ಬೆಲ್ಜಿಯಮ್ ಸ್ವಾತಂತ್ರ್ಯ ಘೋಷಿಸಿಕೊಂಡಿತು. ನೆದರ್ಲೆಂಡ್ಸ್ ಬೆಲ್ಜಿಯಂನರನ್ನು ದಮನ ಮಾಡಲು ಪ್ರಯತ್ನಿಸಿದಾಗ ಯೂರೋಪಿನ ದೊಡ್ಡ ರಾಷ್ಟ್ರಗಳು ಅದನ್ನು ತಪ್ಪಿಸಿದವು. ಬೆಲ್ಜಿಯಮ್ ಪ್ರತ್ಯೇಕ ರಾಜ್ಯವಾಯಿತು. 1840ರಲ್ಲಿ ನೆದರ್ಲೆಂಡ್ಸ್ ದೊರೆ ವಿಲಿಯಮ್ ಸಿಂಹಾಸನಾತ್ಯಾಗ ಮಾಡಿದ. ಅನಂತರ ಆತನ ಮಗ 2ನೆಯ ವಿಲಿಯಮ್ 1840ರಿಂದ 1849ರವರೆಗೆ ಆಳಿದ. 1848ರಲ್ಲಿ ನೆದರ್ಲೆಂಡ್ಸ್‍ಗೆ ಪ್ರಗತಿ ಪರ ಸಂವಿಧಾನವನ್ನು ನೀಡಿದ. 3ನೆಯ ವಿಲಿಯಂ 1849ರಿಂದ 1890ರವರೆಗೆ ಆಳಿದ. ಅನಂತರ ಆತನ ಮಗಳು ವಿಲೆಹೆಲ್ಮಿನ ರಾಣಿಯಾದಳು.

	ಒಂದನೆಯ ಮಹಾಯುದ್ಧದಲ್ಲಿ (1914-1918) ಹಾಲೆಂಡ್ ತಟಸ್ಥವಾಗಿತ್ತು. ಯುದ್ಧಾನಂತರ ಹಾಲೆಂಡಿನ ವ್ಯಾಪಾರ, ವ್ಯವಸಾಯ ಮತ್ತು ಕೈಗಾರಿಕೆಗಳು ಅಭಿವೃದ್ಧಿಹೊಂದಿದುವು. ಎರಡನೆಯ ಮಹಾಯುದ್ಧದಲ್ಲಿ ಹಿಟ್ಲರನ ನಾಟ್ಸಿ ಸೇನೆ 1940ರ ಮೇ 10ರಂದು ಹಾಲೆಂಡಿನ ತಾಟಸ್ಥ್ಯವನ್ನು ಲೆಕ್ಕಿಸದೆ ಅದರ ಮೇಲೆ ಆಕ್ರಮಣ ನಡೆಸಿತು. ಹಾಲೆಂಡಿನ ರಾಣಿ ಇಂಗ್ಲೆಂಡಿಗೆ ಪಲಾಯನ ಮಾಡಿದಳು. ಹಾಲೆಂಡ್ ಶರಣಾಗತವಾಗಿ ಜರ್ಮನಿಯ ಹತೋಟಿಗೆ ಒಳಪಟ್ಟಿತು. ಹಾಲೆಂಡಿನ ವಸಾಹತುಗಳನ್ನು ಆಳಲು ಇಂಗ್ಲೆಂಡಿನಲ್ಲಿ ಡಚ್ ಸರ್ಕಾರವನ್ನು ರಚಿಸಲಾಯಿತು. 1941ರ ಡಿಸೆಂಬರ್ 8ರಂದು ಲಂಡನ್ನಿನಲ್ಲಿದ್ದ ನೆದರ್ಲೆಂಡ್ಸ್ ಸರ್ಕಾರ ಜಪಾನಿನ ಮೇಲೆ ಯುದ್ಧ ಘೋಷಿಸಿತು. ಜಪಾನು ಡಚ್ ಈಸ್ಟ್ ಇಂಡೀಸನ್ನು ಆಕ್ರಮಿಸಿತು. 1945ರ ಮೇ 4ರಂದು ನೆದರ್ಲೆಂಡ್ಸ್‍ನಲ್ಲಿದ್ದ ಜರ್ಮನ್ ಸೈನ್ಯಗಳು ಸೋತು ಮಿತ್ರರಾಷ್ಟ್ರಗಳಿಗೆ ಶರಣಾಗತವಾದವು. ವಿಲ್ಹೆಲ್ಮಿನ ರಾಣಿ ನೆದರ್ಲೆಂಡ್ಸನ್ನು 50 ವರ್ಷಗಳ ಕಾಲ ಆಳಿ ಸೆಪ್ಟೆಂಬರ್ 1948ರಲ್ಲಿ ಮರಣಹೊಂದಿದಳು. ಜೂಲಿಯಾನ ರಾಣಿಯಾದರು. 1949ರಲ್ಲಿ ನೆದರ್ಲೆಂಡ್ಸಸ ಸರ್ಕಾರ ಇಂಡೋನೇಷ್ಯಕ್ಕೆ (ಡಚ್ ಈಸ್ಟ್ ಇಂಡೀಸ್) ಸ್ವಾತಂತ್ರ್ಯ ನೀಡಿತು. ಇತರ ವಸಾಹತುಗಳೂ ಕ್ರಮೇಣ ಸ್ವಾತಂತ್ರ್ಯ ಪಡೆದುವು.

	1947ರಲ್ಲಿ ನೆದರ್ಲೆಂಡ್ಸ್, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್‍ಗಳು ಒಕ್ಕೂಟ ಮಾಡಿಕೊಂಡವು (ಬೆನೆಲಕ್ಸ್). 1949ರಲ್ಲಿ ನೆದರ್ಲೆಂಡ್ಸ್ ಉತ್ತರ ಅಟ್ಲಾಂಟಿಕ್ ಕೌಲು ಸಂಘದ ಸದಸ್ಯ ರಾಷ್ಟ್ರವಾಯಿತು. 1952ರಲ್ಲಿ ಅದು ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಕೂಟವನ್ನು ಸೇರಿತು; 1955ರಲ್ಲಿ ಪಶ್ಚಿಮ ಯೂರೋಪಿಯನ್ ಕೂಟವನ್ನು ಪ್ರವೇಶಿಸಿತು. ಅದು ಐರೋಪ್ಯ ಆರ್ಥಿಕ ಸಮುದಾಯವನ್ನು ಐರೋಪ್ಯ ಪರಮಾಣುಶಕ್ತಿ ಸಮುದಾಯವನ್ನೂ ಸೇರಿದ್ದು 1957ರಲ್ಲಿ.		(ಎ.ವಿ.ವಿ.)

ಆಡಳಿತ

	ನೆದರ್ಲೆಂಡ್ಸ್ ವಿಕೇಂದ್ರೀಕೃತ ಏಕಾತ್ಮಕ ರಾಜ್ಯ. ಇದರದು ಸಂವಿಧಾನಬದ್ಧ ರಾಜತ್ವ. ಆರೆಂಜ್-ನಾಸೂ ಮನೆತನದ ಅನುವಂಶಿಕ ರಾಜಪದ್ಧತಿ ಇದೆ. 1814ರಲ್ಲಿ ರಚಿತವಾದ ಸಂವಿಧಾನದಲ್ಲಿ ಆಗಿಂದಾಗ್ಗೆ ಬದಲಾವಣೆಗಳಾಗಿವೆ. ಸಂವಿಧಾನದಲ್ಲಿ ದೊರೆತನ, ಸಂಸತ್ತು, ಮತದಾನ, ನ್ಯಾಯಪರಿಶೀಲನೆ, ಪ್ರಾಂತೀಯ ಹಾಗೂ ಪೌರ ಆಡಳಿತ, ರಕ್ಷಣೆ, ಸಾರ್ವಜನಿಕ ಹಣಕಾಸು, ಶಿಕ್ಷಣ ಮುಂತಾದವನ್ನು ಕುರಿತ ಅಧಿನಿಯಮಗಳಿವೆ. ಸಂವಿಧಾನದಲ್ಲಿ ಸರ್ವರಿಗೂ ಮತೀಯ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ, ಸಭಾ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ದತ್ತವಾಗಿವೆ.

	ಕಾರ್ಯಾಂಗದ ಅಧಿಕಾರ ಸಾರ್ವಭೌಮರಲ್ಲಿ ನಿಹಿತವಾಗಿದೆ. ದೊರೆ, ಮಂತ್ರಿಗಳು ಇವರಿಂದ ಕೂಡಿದ ರಾಜ್ಯಾಧಿಕಾರವಿದು. ಸಶಸ್ತ್ರ ಬಲಗಳ ನಾಯಕತ್ವ, ವಿದೇಶಾಂಗ ಸಂಬಂಧ, ಮಂತ್ರಿಗಳ ನೇಮಕ ಮತ್ತು ವಜ, ಸಂಸತ್ತಿನ ಉಭಯ ಸದನಗಳ ವಿಸರ್ಜನಾಧಿಕಾರ ಮುಂತಾದ ಅಧಿಕಾರಗಳು ಇದರಲ್ಲಿ ಸೇರಿದೆ. ಆದರೆ ಯುದ್ಧ, ಶಾಂತಿ, ಕೌಲುಗಳ ಅನುಸಮರ್ಥನೆ ಮುಂತಾದವಕ್ಕೆ ಸ್ಟೇಟ್ಸ್-ಜನರಲ್ (ಸಂಸತ್ತು) ಸಮ್ಮತಿಸಬೇಕು. ವಾಸ್ತವವಾಗಿ ಆಢಳಿತ ನಿರ್ವಹಿಸುವ ಮಂತ್ರಿಮಂಡಲದಲ್ಲಿ ಮಂತ್ರಾಧ್ಯಕ್ಷ (ಪ್ರಧಾನ ಮಂತ್ರಿ), ಮಂತ್ರಿಗಳು, ರಾಜ್ಯ ಸಚಿವರು ಇರುತ್ತಾರೆ. ಸ್ಟೇಟ್-ಜನರಲ್‍ನಲ್ಲಿ ಎರಡು ಸದನಗಳಿರುತ್ತವೆ. ದ್ವಿತೀಯ ಸದನದ ಸದಸ್ಯತ್ವ 150. ಅಧಿಕಾರದ ಅವಧಿ 4 ವರ್ಷ. ಪ್ರತ್ಯಕ್ಷ ಕಡ್ಡಾಯ ಸಾರ್ವತ್ರಿಕ ಮತದಾನದಿಂದ ಸದಸ್ಯರು ಆಯ್ಕೆಯಾಗುತ್ತಾರೆ. 23 ವರ್ಷ ತುಂಬಿದ ಜನರಿಗೆಲ್ಲ ಮತಾಧಿಕಾರವುಂಟು. ಅನುಪಾತಿ ಪ್ರಾತಿನಿಧ್ಯದ ಪ್ರಕಾರ ಆಯ್ಕೆಯಾಗುತ್ತದೆ. ಪ್ರಥಮ ಸದನದ ಅವಧಿ 6 ವರ್ಷ. ಸದಸ್ಯರ ಸಂಖ್ಯೆ 75. ಅರ್ಧದಷ್ಟು ಸದಸ್ಯರು ಪ್ರತಿ 3 ವರ್ಷಗಳಿಗೆ ಆಯ್ಕೆಯಾಗುತ್ತಾರೆ. ಈ ಸದನದ ಸದಸ್ಯರು ಪ್ರಾಂತೀಯ ವರ್ಗಗಳಿಂದ ಆಯ್ಕೆಯಾಗುತ್ತಾರೆ. ಸ್ಟೇಟ್-ಜನರಲ್, ಪ್ರಾಂತೀಯ ವರ್ಗ (ಎಸ್ಟೇಟ್), ಪೌರ ಮಂಡಳೀ ಇವುಗಳಿಗೆ ನಡೆಯುವ ಚುನಾವಣೆಗಳಲ್ಲಿ ಮತದಾನ ಕಡ್ಡಾಯ.

	ಪ್ರಾಂತೀಯ ಆಡಳಿತ: ನೆದರ್ಲೆಂಡ್ಸಿನಲ್ಲಿ ಹನ್ನೊಂದು ಪ್ರಾಂತ್ಯಗಳಿವೆ. ಪ್ರತಿ ಪ್ರಾಂತ್ಯಕ್ಕೂ ಒಬ್ಬ ರಾಜ್ಯಪಾಲ ಇರುತ್ತಾನೆ. ಪ್ರಾಂತೀಯ ಸ್ಟೇಟ್‍ಗಳಿಗೆ ಅನುಪಾತಿ ಪ್ರಾತಿನಿಧ್ಯಾನುಗುಣವಾಗಿ ಆಯ್ಕೆಯಾಗುತ್ತದೆ. ಪ್ರತಿ ಪ್ರಾಂತೀಯ ಸ್ಟೇಟ್‍ನಿಂದಲೂ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರು ಚುನಾಯಿತರಾಗುತ್ತಾರೆ.

	ಪೌರಾಡಳಿತ: ದೇಶದಲ್ಲಿ ಸುಮಾರು 1,000 ಪೌರಸಭೆಗಳಿವೆ. ಪ್ರತಿ ಪೌರಸಭೆಗೂ ಒಬ್ಬ ಬರ್ಗೊಮಾಸ್ಟರ್ ಇರುತ್ತಾನೆ. ಇವನಿಗೆ ನೆರವು ನೀಡಲು ಆಲ್ಡರ್ ಮನ್‍ಗಳ ಮಂಡಲಿ ಇರುತ್ತದೆ. ಮಂಡಲಿಯ ಸದಸ್ಯರ ಆಯ್ಕೆಯಾಗುವುದು ಸ್ಥಳೀಯ ನಿವಾಸಿಗಳಿಂದ. 

	ನ್ಯಾಯಪಾಲನೆ: ದೇಶಕ್ಕೆಲ್ಲ ಅನ್ವಯಿಸುವ ಪರಮೋಚ್ಚ ನ್ಯಾಯಾಲಯ ಹೇಗ್‍ನಲ್ಲಿದೆ. ಆಮ್‍ಸ್ಟರ್‍ಡ್ಯಾಮ್, ಆರ್ನ್‍ಹೆಮ್, ಸರ್ಟೋಜೆನ್ಬಾಸ್, ಲೇವಾರ್ಡನ್ ಮತ್ತು ಹೇಗ್‍ನಲ್ಲಿ ಅಪೀಲು ನ್ಯಾಯಾಲಯಗಳಿವೆ. ಇವುಗಳಿಗೆ ಅನಂತರ ಬರುವಂಥವು 19 ಜಿಲ್ಲಾ ನ್ಯಾಯಾಲಯಗಳು. ಸಿವಿಲ್ ಮತ್ತು ದಂಡಾರ್ಹ ಮೊಕದ್ದಮೆಗಳನ್ನು ವಿಚಾರಿಸುವ ಕ್ಯಾಂಟನ್ ನ್ಯಾಯಾಲಯಗಳು ಅತ್ಯಂತ ಕೆಳಗಿನವು. ಇವುಗಳ ಸಂಖ್ಯೆ 62.						(ಕೆ.ವಿ.ವಿ.)

ಶಿಕ್ಷಣ ಪದ್ಧತಿ

	ನೆದರ್ಲೆಂಡ್ಸಿನ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರದಂತೆ ಚರ್ಚ್ ಮತ್ತು ಖಾಸಗಿ ಸಂಸ್ಥೇಗಳೂ ಭಾಗವಹಿಸುತ್ತಿವೆ. ಎಲ್ಲ ಹಂತಗಳಲ್ಲೂ ಸಾರ್ವಜನಿಕ ಶಾಲೆಗಳನ್ನು ಸರ್ಕಾರ ಮತ್ತು ಪೌರಸಭೆಗಳು ನಡೆಸುತ್ತವೆ. ಕ್ರೈಸ್ತಮತ ಪೀಠದವರೂ ಸಂಘ ಸಂಸ್ಥೆಗಳೂ ಐಚ್ಛಿಕವಾಗಿ ಆ ಕಾರ್ಯವನ್ನು ಕೈಗೊಂಡಿವೆ. ಆದರೆ ಖಾಸಗಿ ವ್ಯಕ್ತಿಗಳು ಈ ದೇಶದಲ್ಲಿ ಅಧಿಕೃತ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಅವಕಾಶವಿತ್ತಿಲ್ಲ.

	ರಾಷ್ಟ್ರ ಯಾವ ಅಧಿಕೃತ ಮತೀಯ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿಲ್ಲವಾದರೂ ಕ್ರೈಸ್ತಮತ ಪೀಠಗಳು ನಡೆಸುತ್ತಿರುವ ಶಾಲೆಗಳಲ್ಲಿ ಆಯಾ ಪಂಥದ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಂಡಿವೆ. ಐಚ್ಛಿಕ ಶಾಲೆಗಳಲ್ಲಿ ರೋಮನ್ ಕ್ಯಾತೊಲಿಕ್ ಪ್ರಾಟೆಸ್ಟೆಂಟ್ ಶಾಲೆಗಳು ತಮ್ಮ ತಮ್ಮ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಂಡಿವೆ. ಖಾಸಗಿ ಸಂಸ್ಥೆಗಳು ಯಾವ ಪಂಥಕ್ಕೂ ಸೇರದಿದದ್ದು ತಮ್ಮ ಶಾಲೆಯಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಏರ್ಪಡಿಸಿಕೊಂಡಿಲ್ಲ. ಈ ದೃಷ್ಟಿಯಲ್ಲಿ ಅವು ಬಹುಮಟ್ಟಿಗೆ ಸರ್ಕಾರದ ಶಾಲೆಗಳಂತೆಯೇ ಇದೆ.

	ಆಡಳಿತ: ಶಿಕ್ಷಣ ಮತ್ತು ವಿಜ್ಞಾನದ ಸಚಿವಾಲಯ ರಾಷ್ಟ್ರದ ಶಿಕ್ಷಣದ ಸ್ಥೂಲ ಆಡಳಿತವನ್ನು ತನ್ನ ಪರೀಕ್ಷಾಧಿಕಾರಿಗಳ ಮೂಲಕ ನೋಡಿಕೊಳ್ಳುವುದರ ಜೊತೆಗೆ ಅದರ ಆರ್ಥಿಕ ಕಾರ್ಯಾಚರಣೆಯನ್ನೂ ನಿಯಂತ್ರಿಸುತ್ತವೆ. ಶಾಲಾಕಾಲೇಜುಗಳ ನೇರ ಆಡಳಿತವನ್ನು ಪೌರಸಭೆ ಅಥವಾ ಐಚ್ಛಿಕ ಶಾಲೆಗಳ (ವಾಲಂಟರಿ ಸ್ಕೂಲ್) ಆಡಳಿತ ಮಂಡಲಿಗಳೂ ನೋಡಿಕೊಳ್ಳುತ್ತವೆ. ಶಾಲಾಕಟ್ಟಡಗಳ ನಿರ್ಮಾಣ, ಶಾಲೆಯ ಆಡಳಿತ- ಇವು ಆಯಾ ಆಡಳಿತ ಸಂಸ್ಥೆಗೇ ಸೇರುತ್ತವೆ. ಬೋಧನೆ ಮತ್ತು ಶಾಲೆಯ ಕಾರ್ಯನಿರ್ವಹಣೆ ಶಾಲೆಯ ನಿರ್ದೇಶಕರಿಗೂ (ಡೈರೆಕ್ಟರ್) ಅಧ್ಯಾಪಕರಿಗೂ ಸೇರಿರುತ್ತವೆ. ಪ್ರಾಥಮಿಕ ಪೂರ್ವ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಧ್ಯಾಪಕರನ್ನು ಆಡಳಿತಮಂಡಲಿಗಳೇ ನೇಮಿಸುತ್ತವೆ. ಪರೀಕ್ಷೆಗೆ ಸಂಬಂಧಿಸಿದ ವ್ಯವಸ್ಥೆಯನ್ನೂ ಹಾಗೂ ರಾಷ್ಟ್ರದ ನೀತಿಯನ್ನು ಅನುಸರಿಸುವಾಗ ತಲೆದೋರಬಹುದಾದ ತೊಡಕುಗಳನ್ನು ನಿವಾರಿಸುವ ಕಾರ್ಯವನ್ನು ಸಚಿವಾಲಯವೇ ನೋಡಿಕೊಳ್ಳುತ್ತದೆ. ಎಲ್ಲ ಅಧ್ಯಾಪಕರೂ ಅವರು ಕೆಲಸಮಡುವ ಶಾಲೆಗೆ ಗೊತ್ತು ಮಾಡಿರುವ ಶಿಕ್ಷಣಾರ್ಹತೆಯನ್ನು ಪಡೆದಿರುವುದು ಅಗತ್ಯವೆಂಬ ರಾಜ್ಯಶಾಸನವುಂಟು.

	ಖಾಸಗಿ ಶಾಲೆಗಳಿಗೆ ಅಂಗೀಕಾರ ಕೊಡುವಾಗ ಅದರ ಆಡಳಿತ ಮಂಡಲಿ ನಿಷ್ಕರ್ಷಿಸಿರುವ ಗುಣಮಟ್ಟವನ್ನು ಪಾಲಿಸಬೇಕೆಂಬ ನಿಯಮವುಂಟು. ಪ್ರಾಥಮಿಕ ಮತ್ತು ಪ್ರಾಥಮಿಕ ಪೂರ್ವದ ಶಾಲೆಗಳಲ್ಲಿ ನಿಯಮಿತ ಸಂಖ್ಯೆಯ ವಿದ್ಯಾರ್ಥಿಗಳಿರಬೇಕೆಂಬ ನಿಯಮವೂ ಉಂಟು. ಖಾಸಗಿ ಪ್ರೌಢಶಾಲೆಗಳನ್ನು ಅಂಗೀಕರಿಸುವಾಗ ಆ ಪ್ರದೇಶದ ಶಿಕ್ಷಣಾಭಿವೃದ್ಧಿ ಯೋಜನೆಯನ್ನು ಆಧಾರ ಮಾಡಿಕೊಳ್ಳಲಾಗುವುದು. ಐಚ್ಛಿಕ ಶಾಲೆಗಳಿಗೆ ಅವು ಶುಲ್ಕ, ದತ್ತಿ ಮುಂತಾದವುಗಳಿಂದ ಸಂಗ್ರಹಿಸುವ ಹಣದ ಜೊತೆಗೆ ಸರ್ಕಾರ ವೆಚ್ಚದ ಉಳಿದ ಹಣವನ್ನು ಅನುದಾನವಾಗಿ ನೀಡುತ್ತದೆ.

	ಶಿಕ್ಷಣದ ರಚನೆ: ನೆದರ್ಲೆಂಡ್ಸಿನ ಶಿಕ್ಷಣ ಪ್ರಾಥಮಿಕ ಪೂರ್ವ, ಪ್ರಾಥಮಿಕ ಪ್ರೌಢ, ಉನ್ನತ, ವಿಶೇಷ- ಈ ಐದು ಹಂತಗಳಲ್ಲಿ ಏರ್ಪಟ್ಟಿದೆ. ಕಡ್ಡಾಯ ಪ್ರಾಥಮಿಕ ಶಿಕ್ಷಣ ಮಕ್ಕಳ ಏಳನೆಯ ಹುಟ್ಟುಹಬ್ಬದ ಅನಂತರ ಪ್ರಾರಂಭವಾಗುತ್ತದೆ. ಕಡ್ಡಾಯ ಶಿಕ್ಷಣದ ವಯೋಮಿತಿ 15ನೆಯ ವರ್ಷವೆಂದು ನಿಷ್ಕರ್ಷಿಸಿದೆ. ಪ್ರಾಥಮಿಕ ಪೂರ್ವದ ಶಿಕ್ಷಣ ಮಕ್ಕಳನ್ನು 3-4ನೆಯ ವರ್ಷದಿಂದ ಸೇರಿಸಿಕೊಂಡು ಪ್ರಾಥಮಿಕ ಶಾಲೆಗೆ ಸೇರಲು ಅವರಿಗೆ ಸಿದ್ಧತಾರೂಪದ ಶಿಕ್ಷಣವನ್ನು ನೀಡುತ್ತವೆ. ಆರು ವರ್ಷಗಳ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದೈಹಿಕ, ಮಾನಸಿಕ ಹಾಗೂ ನೈತಿಕ ಬೆಳವಣಿಗೆಯ ಕಡೆ ಗಮನ ಕೊಡುವುದರ ಜೊತೆಗೆ ಉಚಿತವೂ, ಉಪಯುಕ್ತವೂ ಆದ ಕಸಬು ಕಲೆಗಳನ್ನು ಕಲಿಸಲಾಗುವುದು.

	ನೆದರ್ಲೆಂಡ್ಸಿನಲ್ಲಿ ಮೂರು ವಿಧವಾದ ಪ್ರೌಢಶಾಲೆಗಳುಂಟು. ಮೊದಲನೆಯ ವಿಧದ ಆರು ವರ್ಷ ಕಾಲಾವಧಿಯ ಪ್ರೌಢಶಾಲೆಗಳು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸಿದ್ಧಪಡಿಸುತ್ತವೆ. ಎರಡನೆಯ ವಿಧದ ಪ್ರೌಢಶಾಲೆಗಳಲ್ಲಿ ಮೂರು ಅಂತಸ್ತುಗಳುಂಟು. 1-2 ವರ್ಷಗಳ ಪ್ರೌಢಶಾಲೆ, 3-4 ವರ್ಷಗಳ ಪ್ರೌಢಶಾಲೆ ಮತ್ತು 5 ವರ್ಷಗಳ ಪ್ರೌಢಶಾಲೆ. ಇವಾವೂ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸಿದ್ಧಪಡಿಸುವುದಿಲ್ಲ. ಮೂರನೆಯ ವಿಧದ ಪ್ರೌಢಶಾಲೆ ವೃತ್ತಿ ಶಿಕ್ಷಣಕ್ಕೆ ಮೀಸಲಾಗಿದೆ ಆದರೆ ಅಲ್ಲಿನ ಶಿಕ್ಷಣದ ಕಾಲಾಔಧಿ ಬೇರೆ ಬೇರೆ ವೃತ್ತಿಗಳಿಗೆ ಬೇರೆ ಬೇರೆಯಾಗಿರುತ್ತದೆ. ತಾಂತ್ರಿಕ ಶಿಕ್ಷಣ, ಗೃಹವಿಜ್ಞಾನ, ಕೃಷಿವಿಜ್ಞಾನ, ವಿತರಣೆಯ ಉದ್ಯೋಗ, ಆರ್ಥಿಕ ವಹಿವಾಟು, ಅಧ್ಯಾಪಕರ ಶಿಕ್ಷಣ- ಇವು ಇಲ್ಲಿ ವ್ಯವಸ್ಥೆಗೊಂಡಿರುವ ಮುಖ್ಯ ಉದ್ಯೋಗಗಳ ಶಿಕ್ಷಣ.

	ಕೆಲವು ಕಡೆ ಮೇಲಿನ ಎಲ್ಲ ಅಥವಾ ಹಲವು ಪ್ರೌಢಶಾಲಾ ತರಗತಿಗಳನ್ನೊಳಗೊಂಡ ವ್ಯಾಪಕ ರೀತಿಯ (ಕಾಂಪ್ರಿಹೆನ್ಸಿವ್) ಪಾಠಶಾಲೆಗಳು ಏರ್ಪಟ್ಟಿರುವುದುಂಟು. ಅಲ್ಲಿ ಮೊದಲನೆಯ ವರ್ಷದ ಶಿಕ್ಷಣ ಎಲ್ಲ ವಿದ್ಯಾರ್ಥಿಗಳಿಗೂ ಸರ್ವಸಾಮಾನ್ಯವಾಗಿರುತ್ತದೆ. ಎರಡನೆಯ ವರ್ಷದಿಂದ ಅವರವರ ಉದ್ದೇಶಕ್ಕನುಗುಣವಾಗಿ ಬೇರೆ ಬೇರೆ ತರಗತಿಗಳಾಗಿ ವಿಂಗಡವಾಗುವುದು.

	ಅಧ್ಯಾಪಕರ ಶಿಕ್ಷಣ: ಪ್ರಾಥಮಿಕ ಪೂರ್ವದ ಶಾಲೆಗಳಲ್ಲಿ ಅಧ್ಯಾಪಕರಾಗತಕ್ಕವರು ಪ್ರೌಢಶಾಲೆಯ 2-3 ವರ್ಷ ಶಿಕ್ಷಣ ಮುಗಿಸಿದ್ದರೆ ನಾಲ್ಕು ವರ್ಷ ಶಿಕ್ಷಣ ಪಡೆಯಬೇಕು. ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪೂರ್ಣವಾಗಿ ಮುಗಿಸಿದವರು ಎರಡು ವರ್ಷದ ವೃತ್ತಿ ಶಿಕ್ಷಣ ಪಡೆಯುವ ಸೌಲಭ್ಯವನ್ನು ಏರ್ಪಡಿಸಿದೆ.

	ಪ್ರಾಥಮಿಕ ಶಾಲೆಯ ಅಧ್ಯಾಪಕರ ಶಿಕ್ಷಣ 5 ವರ್ಷಗಳ ಅವಧಿಯದು. ಅದರ ಮೊದಲ ನಾಲ್ಕು ವರ್ಷಗಳ ಪ್ರಾಥಮಿಕ ಪೂರ್ವದ ಶಾಲೆಗಳ ಶಿಕ್ಷಕರ ಶಿಕ್ಷಣದಂತೆಯೆ ಇರುತ್ತದೆ. ಪೂರ್ಣವಾಗಿ ಪ್ರೌಢಶಾಲೆಯ ಶಿಕ್ಷಣ ಮುಗಿಸಿದವರು ಮೂರು ವರ್ಷದ ವೃತ್ತಿ ಶಿಕ್ಷಣ ಪಡೆಯುವರು. ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಅಧ್ಯಾಪಕರಾಗತಕ್ಕವರು ಈ ಶಿಕ್ಷಣವನ್ನು ನಾಲ್ಕೇ ವರ್ಷದಲ್ಲೂ ಮುಖ್ಯೋಪಾಧ್ಯಾಯರಾಗತಕ್ಕವರು 5 ವರ್ಷವೂ ಪಡೆಯಬೇಕೆಂಬ ನಿಯಮವುಂಟು. ಕೊನೆಯ ವರ್ಷದ ಶಿಕ್ಷಣ ಮುಖ್ಯವಾಗಿ ಶಾಲೆಯ ಆಡಳಿತ ನಿರ್ವಹಣೆಯ ತರಬೇತಿಗಾಗಿ ಮೀಸಾಲಾಗಿರುವುದು.

	ಪ್ರೌಢಶಾಲೆಯ ಅಧ್ಯಾಪಕರ ಶಿಕ್ಷಣ ವಿಶ್ವವಿದ್ಯನಿಲಯದಲ್ಲೂ ಭಾಗಶಃ ಕಾಲದ ಶಿಕ್ಷಣ ಸಂಸ್ಥೆಗಳಲ್ಲೂ ಏರ್ಪಡಿಸಲಾಗಿದೆ. ಎಂದರೆ ಅಲ್ಲಿಗೆ ಅಧ್ಯಾಪಕರಾಗತಕ್ಕವರು ಪದವೀಧರರಾಗಿರುವುದರ ಜೊತೆಗೆ ವೃತ್ತಿ ಶಿಕ್ಷಣವನ್ನೂ ಪಡೆದಿರುವುದು ಅಗತ್ಯವಾಗುತ್ತದೆ.

	ಉನ್ನತ ಶಿಕ್ಷಣ: ನೆದರ್ಲೆಂಡ್ಸಿನಲ್ಲಿ ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲೂ ವಿಶಿಷ್ಟ ಸಂಸ್ಥೆಗಳಲ್ಲೂ ದೊರೆಯುತ್ತದೆ. ಸಾಮಾನ್ಯವಾಗಿ ಅಲ್ಲಿನ ಶಿಕ್ಷಣದ ಕಾಲಾವಧಿ ವಿದ್ಯಾರ್ಥಿಗಳು ಆರಿಸಿಕೊಳ್ಳುವ ವ್ಯಾಸಂಗ ವಿಷಯಗಳನ್ನು ಅನುಸರಿಸಿ ವ್ಯತ್ಯಾಸವಾಗುವುದು. ಆದರೆ ಯಾವ ವ್ಯಾಸಂಗವಿಷಯವೂ 5 ವರ್ಷUಳಿಗಿಂತ ಕಡಿಮೆಯಿಲ್ಲ. ದೇಶದಲ್ಲಿ ಒಟ್ಟು ಹನ್ನೊಂದು ವಿಶ್ವವಿದ್ಯಾಲಯಗಳು ಅಥವಾ ಆ ಅಂತಸ್ತಿನ ಶಿಕ್ಷಣ ಸಂಸ್ಥೆಗಳಿವೆ. ಅವುಗಳಲ್ಲಿ ಲೀಡನ್, ಗ್ರೋನಿಂಜನ್ ಮತ್ತು ಯೂಟ್ರಿಕ್ಟ್ ವಿಶ್ವವಿದ್ಯಾಲಯಗಳು ಸರ್ಕಾರದವು; ಆಮ್‍ಸ್ಟರ್ ಡ್ಯಾಮ್ ಪ್ರೌಡಸಭಾ ವಿಶ್ವವಿದ್ಯಾಲಯ, ಡೆಲ್ಪ್ಟ್ ಔದ್ಯೋಗಿಕ ವಿಜ್ಞಾನದ ವಿಶ್ವವಿದ್ಯಾಲಯ, ವಾಜನಿಂಜನ್ ಕೃಷಿ ವಿಶ್ವವಿದ್ಯಾಲಯ, ಎನ್‍ಷೀಡ್ ಔದ್ಯೋಗಿಕ ವಿಜ್ಞಾನ ವಿಶ್ವವಿದ್ಯಾಲಯ-ಇವು ಸರ್ಕಾರದ ಇತರ ವಿಶ್ವವಿದ್ಯಾಲಯಗಳು. ಆಮ್‍ಸ್ಟರ್ ಡ್ಯಾಮಿನ ಕ್ಯಾಲ್ವಿನಿಸ್ಟ್ ಫ್ರೀ ವಿಶ್ವವಿದ್ಯಾಲಯ, ರಾಟರ್ ಡ್ಯಾಮಿನ ನೆದರ್ಲೆಂಡ್ ಅರ್ಥಶಾಸ್ತ್ರ ವಿದ್ಯಾಲಯ (ಅಲಿಪ್ತ) ಮತ್ತು ಟಿಲ್‍ಬರ್ಗನ್ ಕ್ಯಾತೊಲಿಕ್ ಅರ್ಥಶಾಸ್ತ್ರ ವಿದ್ಯಾಲಯ- ಇವು ಇಲ್ಲಿನ ಇತರ ಉನ್ನತಶಿಕ್ಷಣದ ವಿದ್ಯಾಲಯಗಳು.

	ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ದಂತವೈದ್ಯ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳು, ಪಶುವೈದ್ಯ, ತತ್ತ್ವಶಾಸ್ತ್ರ ಮುಂತಾದ ವ್ಯಾಸಂಗ ವಿಭಾಗಗಳಿವೆ. ಔದ್ಯೋಗಿಕ ವಿಜ್ಞಾನದ ವಿರ್ಶವವಿದ್ಯಾಲಯಗಳಲ್ಲಿ ವಿದ್ಯುತ್‍ಶಿಲ್ಪ, ಯಂತ್ರಶಿಲ್ಪ, ವಾಯುಯಾನ ಶಾಸ್ತ್ರ, ವಿಜ್ಞಾನ ರಸಾಯನಶಾಸ್ತ್ರ, ಪ್ರಾಚ್ಯಶಾಸ್ತ್ರ, ವಾಸ್ತು, ಸಿವಿಲ್ ಇಂಜಿನಿಯರಿಂಗ್_ ಈ ಅಧ್ಯಯನ ವಿಭಾಗಗಳಿವೆ. ಜೊತೆಗೆ ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ಸಮಾಜವಿಜ್ಞಾನ ಮುಂತಾದ ಸಾಂಸ್ಕøತಿಕ ವಿಷಯಗಳನ್ನೊಳಗೊಂಡ ಒಂದು ಶಾಖೆಯೂ ಇರುವುದು.

	ಯುವಜನರು ವಿಶ್ವವಿದ್ಯಾಲಯಗಳಲ್ಲಿ ಪಡೆಯುವ ಜ್ಞಾನ ಮತ್ತು ಕೌಶಲಗಳನ್ನು ಸ್ವತಂತ್ರ ಉದ್ಯೋಗದಲ್ಲಿ ಬಳಸಬೇಕೆಂಬ ಅಂಶಕ್ಕೆ ಪ್ರಾಧಾನ್ಯವುಂಟು. ಜೊತೆಗೆ ಪ್ರಮೂಖ ಸಾರ್ವಜನಿಕ ಸ್ಥಾನಗಳಿಗೆ ಆಯ್ಕೆ ಮಾಡುವಾಗಲೂ ವಿಶ್ವವಿದ್ಯಾಲಯದ ಪದವಿ ಅಗತ್ಯವೆಂದು ಗೊತ್ತುಮಾಡಿರುವರು.

	ವಿಶೇಷ ಶಿಕ್ಷಣ: 1967ರ ರಾಜ್ಯಶಾಸನದ ಪ್ರಕಾರ ರಾಷ್ಟ್ರದ ದೈಹಿಕ, ಮಾನಸಿಕ, ಆರ್ಥಿಕ ಮತ್ತಿತರ ನ್ಯೂನತೆಯುಳ್ಳ ಮಕ್ಕಳಿಗೆಲ್ಲ ರಾಷ್ಟ್ರದ ವೆಚ್ಚದಲ್ಲಿ ವಿಶೇಷ ಶಿಕ್ಷಣವೀಯುವ ಸೌಲಭ್ಯವನ್ನು ಕಲ್ಪಿಸಿದೆ. ಅದಕ್ಕಾಗಿ ಸರ್ಕಾರ ಅನೇಕ ರಕ್ಷಣಾಲಯಗಳನ್ನೂ ವಿಶಿಷ್ಟ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದೆ. ಅಂಬಿಗರು, ಅಲೆಮಾರು ಜನರು ಮತ್ತು ಇತರ ದಲಿತವರ್ಗದವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡಿದೆ.

	ಶಾಲೆಗಳಲ್ಲಿ ಪಠ್ಯವಸ್ತು ಮತ್ತು ಬೋಧನಕ್ರಮ: ರಾಷ್ಟ್ರ ನಿಷ್ಕರ್ಷಿಸಿರುವ ಚೌಕಟ್ಟಿನೊಳಗೆ ಆಡಳಿತಮಂಡಲಿ ತಮ್ಮ ತಮ್ಮ ಶಾಲೆಯ ಪಠ್ಯವಿಷಯವನ್ನು ಗೊತ್ತುಮಾಡುತ್ತವೆ. ಪ್ರಾಥಮಿಕ ಪೂರ್ವದ ಮತ್ತು ಪ್ರಾಥಮಿಕ ಶಾಲೆಗಳ ಪಠ್ಯ ಕ್ರಮವನ್ನು ನಿರ್ಧರಿಸುವಾಗ ಆಡಳಿತಮಂಡಲಿಗೆ ಹೆಚ್ಚು ಸ್ವಾತಂತ್ರ್ಯವುಂಟು. ಆದರೆ ಪ್ರೌಢಶಾಲೆಗಳ ಪಠ್ಯಕ್ರಮವನ್ನು ರೂಪಿಸುವಾಗ ಆಡಳಿತಮಂಡಲಿಗೆ ಅಷ್ಟು ಸ್ವಾತಂತ್ರ್ಯವಿಲ್ಲ. ಅದು ತಾನು ರೂಪಿಸುವ ಪಠ್ಯಕ್ರಮಕ್ಕೆ ಸರ್ಕಾರದ ಅನುಮತಿಯನ್ನು ಪಡೆಯುವುದು ಅಗತ್ಯವಾಗುತ್ತದೆ.

	ಪ್ರಾಥಮಿಕ ಪೂರ್ವದ ಶಾಲೆಗಳಲ್ಲಿ ಆಟ, ದೈಹಿಕಶಿಕ್ಷಣ, ಬಣ್ಣಗಳನ್ನು ಗುರುತಿಸುವುದು, ಮಣ್ಣಿನಲ್ಲಿ ಮಾದರಿ ಮಾಡುವುದು, ಸಂಗೀತ, ಚಿತ್ರ ಬರೆಯುವುದು, ಸಂವಾದ ಕತೆ ಹೇಳುವುದು ಈ ರೀತಿಯ ಕಾರ್ಯಕ್ರಮಗಳಿರುತ್ತವೆ. ಒಂದೊಂದು ಶಾಲೆಯೂ ತನ್ನದೇ ಆಧ ಕಾರ್ಯಕ್ರಮವನ್ನು ಹೊಂದಿರುವುದರಿಂದ ಅವು ಪ್ರಚಾರದಲ್ಲಿರುವ ಯಾವುದೊಂದು ಪದ್ಧತಿಯನ್ನೂ (ಕಿಂಡರ್‍ಗಾರ್ಡನ್, ನರ್ಸರಿ, ಮಾಂಟೆಸೋರಿ) ಅನುಸರಿಸುವಂತೆ ತೋರುವುದಿಲ್ಲ.

	ಪ್ರಾಥಮಿಕ ಶಾಲೆಯ ಪಠ್ಯಕ್ರಮದಲ್ಲಿ ಬೋಧಿಸಬೇಕಾದ ವಿಷಯಗಳು, ಪ್ರತಿ ವಿಷಯಕ್ಕೂ ಹಂಚಬೇಕಾದ ಕಾಲ ಹಾಗೂ ಬಳಸಬೇಕಾದ ಪಠ್ಯಪುಸ್ತಕಗಳನ್ನು ಕೇಂದ್ರ ಸಚಿವಾಲಯವೇ ಸೂಚಿಸುತ್ತದೆ. ಮುಖ್ಯೋಪಾಧ್ಯಾಯರು ಶಾಲೆಯ ಇತರ ಅಧ್ಯಾಪಕರೊಡನೆ ಸಮಾಲೋಚಿಸಿ ಅದನ್ನು ತಯಾರಿಸಿ, ಆ ಕ್ಷೇತ್ರದ ತನಿಖಾಧಿಕಾರಿಗಳಿಗೆ ಕಳಿಸಿ ಅವರ ಒಪ್ಪಿಗೆ ಪಡೆಯುವರು. ಸರ್ಕಾರ ಪ್ರಾಥಮಿಕ ಶಾಲೆಯಲ್ಲಿ ಓದುಬರೆಹ, ಲೆಕ್ಕಾಚಾರಗಳ ಜೊತೆಗೆ, ಚರಿತ್ರೆ, ಭೂಗೋಳ, ಪ್ರಕೃತಿಪಾಠ, ಡಚ್ ಭಾಷೆ, ಸಂಗೀತ, ಚಿತ್ರಲೇಖನ, ಹೊಲಿಗೆ (ಬಾಲಕಿಯರಿಗೆ), ದೈಹಿಕ ಶಿಕ್ಷಣ-ಇವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಕಾನೂನು ಮಾಡಿದೆ. ಫ್ರೆಂಚ್, ಜರ್ಮನ್, ಇಂಗ್ಲಿಷ್, ಗಣಿತ, ಕೈಕಸುಬು (ಬಾಲಕರಿಗೆ) ಇವು ಅಲ್ಲಿ ಬೋಧಿಸಬಹುದಾದ ಐಚ್ಛಿಕವಿಷಯಗಳು.

	ಪ್ರೌಢಶಾಲೆಯ ಹಂತದಲ್ಲಿ ಈಚೆಗೆ ಹಲವು ರೀತಿಯ ಪ್ರಯೋಗಗಳು ನಡೆಯುತ್ತಿವೆ. ಅಲ್ಲಿ ಅಸ್ತಿತ್ವದಲ್ಲಿರುವ ಜಿಮ್ನಾಸಿಯಂ, ಅತೀನಿಯಂ ಮತ್ತು ಲೈಸಿಯಂ ಎಂಬ ಮೂರು ವಿಧದ ಪ್ರೌಢಶಾಲೆಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ. ಬಹುಮಟ್ಟಿಗೆ ಇದು ಜರ್ಮನಿಯ ಪ್ರೌಢಶಾಲೆಗಳ ಮಾದರಿಯನ್ನು ಅನುಸರಿಸುತ್ತಿದೆ. ಇವುಗಳಲ್ಲಿ ಮೊದಲ ವರ್ಷದ ತರಗತಿ (ಬ್ರಿಡ್ಜ್ ಕ್ಲಾಸ್) ಎಲ್ಲ ವಿಧದ ಶಾಲೆಗಳಲ್ಲೂ ಒಂದೇ ಆಗಿದ್ದು ಆ ಕಾಲದಲ್ಲಿ ಕಂಡುಬಂದ ವಿದ್ಯಾರ್ಥಿ ಸಾಮಥ್ರ್ಯದ ಆಧಾರದ ಮೇಲೆ ಅವರವರಿಗೆ ಅನುಗುಣವೆನಿಸುವ ಶಾಲೆಗೆ ಸೇರಲು ಅವಕಾಶವಿರುತ್ತದೆ. ಈ ತರಗತಿಯನ್ನು ಅಮೆರಿಕದಲ್ಲಿ ಪ್ರಚಾರದಲ್ಲಿರುವ ಸಮನ್ವೇಷಣ (ಎಕ್ಸ್‍ಪ್ಲೋರೇಟರಿ) ತರಗತಿಗೆ ಹೋಲಿಸಬಹುದು. ಆಗ ಸಮಾಜಪಾಠ, ಭಾಷೆ, ಕಲೆ ಮುಂತಾದ ಅಭಿವ್ಯಕ್ತಿ ವಿಷಯಗಳ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿದೆ. ಜೊತೆಗೆ ಡಚ್, ಇಂಗ್ಲಿಷ್, ಫ್ರೆಂಚ್, ಚರಿತ್ರೆ, ಭೂವಿವರಣೆ ಈ ವಿಷಯಗಳ ವ್ಯಾಸಂಗವನ್ನು ಗೊತ್ತುಮಾಡಿರುವರು. ಎರಡನೆಯ ವರ್ಷ ಜಿಮ್ನಾಸಿಯಂ ಮತ್ತು ಅತೀನಿಯಂಗಗಳಲ್ಲಿ ವಿದ್ಯಾಥಿಗಳನ್ನು ಎ ಮತ್ತು ಬಿ ವರ್ಗಗಳನ್ನಾಗಿ ವಿಂಗಡಿಸುತ್ತಾರೆ. ಜಿಮ್ನಾಸಿಯಂನ ಎ ವರ್ಗದವರು ಲಾಕ್ಷಣಿಕ ಭಾಷೆ ಮತ್ತು ಸಾಹಿತ್ಯಗಳಿಗೆ ಪ್ರಾಧಾನ್ಯವುಳ್ಳ ಶಿಕ್ಷಣವನ್ನೂ ಬಿ ವರ್ಗದವರು ಲಾಕ್ಷಣಿಕ ಭಾಷೆ ಮತ್ತು ಗಣಿತಶಾಸ್ತ್ರಗಳಿಗೆ ಪ್ರಾಧಾನ್ಯವುಳ್ಳ ಶಿಕ್ಷಣವನ್ನೂ ಪಡೆಯುವರು. ಅತೀನಿಯಂನ ಎ ವರ್ಗದ ವಿದ್ಯಾರ್ಥಿಗಳೂ ಸಾಹಿತ್ಯ, ಅರ್ಥಶಾಸ್ತ್ರ ಮತ್ತು ಸಂಸ್ಕøತಿಗಳಿಗೆ ಪ್ರಾಧಾನ್ಯವುಳ್ಳ ಶಿಕ್ಷಣ ಪಡೆಯುತ್ತಾರೆ. ಆದರೆ ಅವರಿಗೆ ಲಾಕ್ಷಣಿಕ ಭಾಷೆಯನ್ನು ಬೋಧಿಸುವುದಿಲ್ಲ. ಬಿ ವರ್ಗದ ವಿದ್ಯಾರ್ಥಿಗಳು ಗಣಿತಕ್ಕೆ ಪ್ರಾಧಾನವುಳ್ಳ ಶಿಕ್ಷಣ ಪಡೆಯುತ್ತಾರೆ. ಅವರು ಲಾಕ್ಷಣಿಕ ಭಾಷೆ ಕಲಿಯುವುದಿಲ್ಲ. ಮೇಲಿನ ಮೂರು ವಿಧದ ಪ್ರೌಢಶಾಲೆಗಳಿಂದ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗುವ ಅವಕಾಶವುಂಟು. ಅಲ್ಲಿರುವ ಮತ್ತೆ ಕೆಲವು ರೀತಿಯ ಸೆಕೆಂಡರಿ ಶಾಲೆಗಳಲ್ಲಿ ಡಚ್ ಭಾಷೆ ಮತ್ತು ಸಾಹಿತ್ಯ, ಫ್ರೆಂಚ್, ಇಂಗ್ಲಿಷ್, ವಿಜ್ಞಾನ, ಗಣಿತ, ಚರಿತ್ರೆ, ಭೂಗೋಳ, ದೈಹಿಕ ಶಿಕ್ಷಣ ಮುಂತಾದ ವಿಷಯಗಳಲ್ಲಿ ಸಾಮಾನ್ಯ ಜೀವನಕ್ಕೆ ಸಂಬಂದಪಟ್ಟ ಮಟ್ಟದ ಶಿಕ್ಷಣವೀಯಲಾಗುವುದು.
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ